Advertisement
ಅಲ್ಲದೆ, ಸುಮಾರು 30 ವರ್ಷಗಳಿಂದ ಮೆಜೆಸ್ಟಿಕ್‌ನ ಬಿಎಂಟಿಸಿ ಪಾದಚಾರಿ ಸುರಂಗ ಮಾರ್ಗದಲ್ಲಿ ವಾಚ್ ವ್ಯಾಪಾರ ಮಾಡುತ್ತಿದ್ದು, ಗಂಗೊಂಡನಹಳ್ಳಿ ನಿವಾಸಿ ರಿಯಾಜ್ ಅಹಮದ್ ಎಂದು ದಾಖಲೆಗಳ ಸಮೇತ ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ.
Related Articles
Advertisement
ರಿಯಾಜ್ ಅಹ್ಮದ್ ದೂರಿನಲ್ಲೇನಿದೆ?: “ನಾನು ರಿಯಾಜ್ ಅಹಮದ್ ಗಂಗೊಂಡಹಳ್ಳಿಯಲ್ಲಿ ವಾಸವಾಗಿದ್ದು, ಮೆಜೆಸ್ಟಿಕ್‌ನ ಬಿಎಂಟಿಸಿ ಸುರಂಗ ಮಾರ್ಗದ ಸಮೀಪ ರಸ್ತೆ ಬದಿ ಕೈಗಡಿಯಾರದ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ಸುಮಾರು 20ಕ್ಕೂ ಹೆಚ್ಚು ವರ್ಷಗಳಿಂದ ವ್ಯಾಪಾರದಲ್ಲಿ ತೊಡಗಿದ್ದೇನೆ.
ಹೀಗಿರುವಾಗ ನಾನು ಮೇ 7ರಂದು ಮಂಗಳವಾರ ಸಂಜೆ ವ್ಯಾಪಾರ ಮುಗಿಸಿಕೊಂಡು ಮನೆಗೆ ವಾಪಸ್ ಹೋಗಲು ಮೆಜೆಸ್ಟಿಕ್‌ನ ಮೆಟ್ರೋ ನಿಲ್ದಾಣಕ್ಕೆ ಹೋಗಿ, ಸಂಜೆ 5.45ರ ಸುಮಾರಿಗೆ ಮನೆಗೆ ಹೋಗಿದ್ದೇನೆ. ನಂತರ ಮನೆಯಲ್ಲಿ ಟಿವಿ ನೋಡುವಾಗ, ಮನೆ ಪಕ್ಕದ ನಿವಾಸಿ ಮೊಹಮ್ಮದ್ ಸೈಫುಲ್ಲಾ ಅವರು, ಸುದ್ದಿ ವಾಹಿನಿ ಒಂದರಲ್ಲಿ ನಮ್ಮನ್ನು ಭಯೋತ್ಪಾದಕನಂತೆ ತೋರಿಸುತ್ತಿದ್ದಾರೆ’ ಎಂದು ಹೇಳಿದರು.
“ನಾನು ಸಾಮಾನ್ಯ ನಾಗರಿಕನಾಗಿದ್ದು, ನನ್ನ ಪತ್ನಿ ಹಾಗೂ ಏಳು ಮಕ್ಕಳ ಜತೆ ವಾಸವಾಗಿದ್ದೇನೆ. ಟಿವಿಯಲ್ಲಿ ನನ್ನ ಬಗ್ಗೆ ಪ್ರಸಾರವಾದ ವರದಿಯಿಂದ ನನಗೆ ವಿಪರೀತ ತೊಂದರೆಯಾಗಿದ್ದು, ಕುಟುಂಬದರೂ ಆತಂಕದಲ್ಲಿದ್ದಾರೆ. ಟಿವಿಯವರು ಪೂರ್ವಾಪರ ತಿಳಿಯದೆ ವರದಿ ಬಿತ್ತಿರಿಸಿದ್ದು, ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಈ ರೀತಿ ವರದಿ ಮಾಡಿದ ಟಿವಿ ಹಾಗೂ ಮಾಧ್ಯಮದವರಿಗೆ ಸಿಸಿ ಕ್ಯಾಮೆರಾ ದೃಶ್ಯಾವಳಿ ನೀಡಿದ ಮೇಟ್ರೋ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು. ನನಗೆ ನ್ಯಾಯ ಕೊಡಿಸಬೇಕು’ ಎಂದು ರಿಯಾಜ್ ಅಹಮದ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರಿಯಾಜ್ ಅಹಮದ್, ಮಾಧ್ಯಮವೊಂದು ನನ್ನನ್ನು ಉಗ್ರ ಎಂದು ಬಿಂಬಿಸಿದ್ದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬ ನೋವಾಗಿದೆ. ಪೂರ್ವಾಪರ ಪರಿಶೀಲಿಸದೆ, ಏಕಾಏಕಿ ಉಗ್ರ ಎಂದು ಬಿಂಬಿಸುವ ಟಿವಿಯವರಿಗೆ ಮುಂದೆ ಏನಾಗುತ್ತದೆ ಎಂಬ ಪರಿಜ್ಞಾನ ಇರುವುದಿಲ್ಲವೇ? ಒಂದು ವೇಳೆ ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹ: ಕಳೆದ ವರ್ಷ ರಾಜ್ಯದ ವಿವಿಧೆಡೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅಲ್ಲದೆ, ನಗರದ ಚಾಮರಾಜಪೇಟೆಯಲ್ಲಿ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರು ಮಕ್ಕಳ ಕಳ್ಳ ಎಂದು ಭಾವಿಸಿ, ಥಳಿಸಿ ಕೊಂದಿದ್ದರು. ಹೀಗಾಗಿ ಅದೇ ರೀತಿ ಯಾರಾದರೂ, ರಿಯಾಜ್‌ರನ್ನು ಉಗ್ರನೆಂದು ಭಾವಿಸಿ ಹಲ್ಲೆ ನಡೆಸಿದರೆ ಯಾರು ಹೊಣೆ? ಹೀಗಾಗಿ ರಿಯಾಜ್ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಉಪ್ಪಾರಪೇಟೆ ಠಾಣೆ ಎದುರು ಜಮಾಯಿಸಿದ್ದ ರಿಯಾಜ್ ಅಹಮದ್ ಸಂಬಂಧಿಕರು ಆಗ್ರಹಿಸಿದರು.
ಮತ್ತೊಬ್ಬ ಶಂಕಿತನ ನಿಗೂಢತೆ ಬೇಧಿಸಲು ಹೊರಟ ಖಾಕಿ!: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದ ನಡೆತೋರಿ ಕೆಲವೇ ನಿಮಿಷಗಳಲ್ಲಿ ನಾಪತ್ತೆಯಾಗಿರುವ ಶಂಕಾಸ್ಪದ ವ್ಯಕ್ತಿಯ ಸುಳಿವು ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ!
ಮೇ 6ರಂದು ರಾತ್ರಿ 7.30ರ ಸುಮಾರಿಗೆ ಮೆಟಲ್ ಡಿಟೆಕ್ಟರ್ ಮೂಲಕ ವ್ಯಕ್ತಿ ಹಾದು ಗೋದಾಗ “ಬಿಪ್’ ಸದ್ದಾಗಿದೆ. ಭದ್ರತಾ ಸಿಬ್ಬಂದಿ ಬ್ಯಾಗಲ್ಲಿ ಏನಿದೆ ಎಂದು ಪ್ರಶ್ನಿಸಿದಾಗ, ಹಣವಿದೆ ಎಂದು ಹೇಳಿದ್ದ ವ್ಯಕ್ತಿ, ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಶಂಕಾಸ್ಪದ ವ್ಯಕ್ತಿ ಯಾರು ಎಂಬ ಬಗ್ಗೆ ಇದುವರೆಗೂ ಮಾಹಿತಿಯಿಲ್ಲ. ಮೆಟ್ರೋ ನಿಲ್ದಾಣ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸುತ್ತಿದ್ದು, ಶಂಕಿತನ ಪತ್ತೆಗೆ ವಿಶೇಷ ತಂಡ ರಚನೆಯಾಗಿದೆ.
ಶಂಕಾಸ್ಪದ ವ್ಯಕ್ತಿ ಪತ್ತೆಗೆ ಹಲವು ಆಯಾಮಗಳಲ್ಲಿ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಶೋಧ ನಡೆಸುತ್ತಿದ್ದೇವೆ . ಸಂಬಂಧಪಟ್ಟ ಇಲಾಖೆಗಳ ಜತೆ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಆದರೆ, ಆತನ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಸುಳ್ಳು ಸುದ್ದಿ ನಂಬಬೇಡಿ: ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ವರ್ತಿಸಿ ನಾಪತ್ತೆಯಾದ ವ್ಯಕ್ತಿ ಯಾರು ಎಂದು ತಿಳಿಯಲು ವಿಶೇಷ ತಂಡ ತನಿಖೆ ನಡೆಸುತ್ತಿದೆ. ಆತ ಮೆಟ್ರೋ ನಿಲ್ದಾಣ ಪ್ರವೇಶಿಸುವ ಮುನ್ನ ಆತನ ಬಳಿ ಶಸ್ತ್ರಾಸ್ತ್ರವಿತ್ತು. ವಸ್ತುವೊಂದನ್ನು ತೆಗೆದುಕೊಂಡು ಹೋದರೆ ಹಣ ನೀಡುವುದಾಗಿ ಮಹಿಳೆ ಒಬ್ಬರಿಗೆ ಆಮಿಷವೊಡ್ಡಿದ್ದ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಇಂತಹ ವದಂತಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ನಗರದ ಮೆಟ್ರೋ ನಿಲ್ದಾಣಗಳಲ್ಲಿ ಸಾಕಷ್ಟು ಬಿಗಿಭದ್ರತೆಯಿದೆ. ಮೆಟ್ರೋ ಭದ್ರತಾ ಸಿಬ್ಬಂದಿ ಜತೆ ನಗರ ಪೊಲೀಸರು ಕೂಡ ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಭದ್ರತೆ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸಿ ಅಲರ್ಟ್ ಆಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.
ರಿಯಾಜ್ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ನೋಡಿದ ಕೂಡಲೆ ಅವರಿಗೆ ತಿಳಿಸಿದೆ. ನಂತರ ಡಿಸಿಪಿ ಅವರಿಗೆ ದೂರು ನೀಡಲಾಗಿದೆ. ಸತ್ಯಾಸತ್ಯತೆ ಪರಿಶೀಲಿಸದೆ ಒಬ್ಬ ವ್ಯಕ್ತಿ ಬಗ್ಗೆ ಅಪಪ್ರಚಾರ ಮಾಡುವ ಹಕ್ಕು ಯಾವ ಮಾಧ್ಯಮಕ್ಕೂ ಇಲ್ಲ.-ಮೊಹಮ್ಮದ್ ಸೈಫುಲ್ಲಾ, ರಿಯಾಜ್ ಸ್ನೇಹಿತರು