Advertisement
ಕಿಂದರಿಜೋಗಿಯೊಬ್ಬ ಕೊಳಲನೂದುತ್ತಾ ಬಂದ. ಇಲಿಗಳೆಲ್ಲ ಅವನನ್ನು ಹಿಂಬಾಲಿಸಿದವು. ಜನರೂ ಈತ ಏನು ಮಾಡಿಯಾನು ಎಂದು ಹಿಂಬಾಲಿಸಿದರು. ಆತ ಎಲ್ಲರನ್ನೂ ನದಿಯೆಡೆಗೆ ಕೊಂಡೊಯ್ದ. ಅಚ್ಚರಿ ಎನಿಸಿತು ಪ್ರತಿಯೊಬ್ಬರಿಗೂ. ಮಾತ ನಾಡಲಿಲ್ಲ. ಹಾಗೆಯೇ ಆತ ನದಿಯ ನೀರಿನ ಮೇಲೆ ನಡೆಯತೊಡಗಿದ. ಜನರೆಲ್ಲ ನದಿ ಬದಿಯಲ್ಲೇ ನಿಂತು ವೀಕ್ಷಿಸತೊಡಗಿದರು. ಇಲಿಗಳೆಲ್ಲ ಜೋಗಿಯನ್ನು ಹಿಂಬಾಲಿಸಿದವು!
Related Articles
Advertisement
ಕಾಲಮಾನ ಬದಲಾಯಿತು. ಸೂರ್ಯ ಏಳುವ ದಿಕ್ಕು ಬದಲಾಗಲಿಲ್ಲ. ನಮ್ಮ ಊರುಗಳು ಬದಲಾದವು. ಅವುಗಳ ಬಣ್ಣಗಳೂ ಬದಲಾಗತೊಡಗಿದವು. ಊರಿನ ಯುವಜನರೆಲ್ಲ ನಗರಕ್ಕೆ ಹೊರಟರು. ಅದಕ್ಕೆ ಉದ್ಯೋಗದ ಹೆಸರು. ಪ್ರತೀ ಯುಗಾದಿಗೆ, ದೀಪಾವಳಿಗೆ ಬರಲು ಮರೆಯಲಿಲ್ಲ. ನವರಾತ್ರಿ, ವಿನಾಯಕ ಚತುರ್ಥಿ ಮತ್ತೂಂದಿಷ್ಟು ಹಬ್ಬಗಳು ಊರಿನಲ್ಲಿ ಉಳಿದವರಿಗೇ ಸೀಮಿತವಾಯಿತು. ಹಬ್ಬಗಳೂ ಸಡಗರದ ಬಣ್ಣ ಕಳೆದುಕೊಂಡವು. ಇರುವವರು ನಾವಿಬ್ಬರೇ, ಮಕ್ಕಳಿಲ್ಲದ ಸಂಭ್ರಮ ಎಂಥದ್ದೇ ಎಂದ ಅಪ್ಪ, ಸಣ್ಣದೊಂದು ಅಡುಗೆ ಮಾಡು ಸಾಕು ಎಂದು ಹಬ್ಬ ಮುಗಿಸಲು ಹೇಳಿದ. ಅಮ್ಮನೂ ಸರಿ ಎಂದು ತಲೆಯಾಡಿಸಿ, ಮುಂದಿನ ಹಬ್ಬ ಜೋರು ಮಾಡೋಣ ಎಂದು ಬಿಟ್ಟಳು. ಅಲ್ಲಿಗೆ ಆ ಹಬ್ಬಗಳು ಮುಗಿದವು. ಸುಗ್ಗಿ ಹಬ್ಬ, ಹಾಡುಗಳೂ ಬದಿಗೆ ಸರಿದವು. ಯುಗಾದಿಯ ಕಳೆ ಕುಂದಲಿಲ್ಲ, ದೀಪಾವಳಿಯ ಪಟಾಕಿಯ ಸದ್ದು ಅಡಗಲಿಲ್ಲ. ಈ ಹಬ್ಬಗಳ ಹಿಂದಿನ ದಿನ ನಗರಗಳಿಗೆ ನಗರಗಳೇ ಖಾಲಿಯಾದವು. ಅರೆ ವರ್ಷಕ್ಕೊಮ್ಮೆ ಕಳೆದುಕೊಳ್ಳುವ ಉತ್ಸಾಹವೆಲ್ಲ ಮರಳಿ ಪಡೆದು ಊರುಗಳು ಪುಟಿಯತೊಡಗಿದ್ದು ಈ ಎರಡು ದಿನಗಳಲ್ಲೇ. ಊರುಗಳು ನಳನಳಿಸುತ್ತವೆ. ರಸ್ತೆ ತುಂಬಾ ಜನರು ಕಾಣುತ್ತಾರೆ. ವಾಹನಗಳು ನಲಿಯತೊಡಗುತ್ತವೆ. ಎರಡು ದಿನ ಸಂಭ್ರಮಕ್ಕೆ ಕೊರತೆ ಇರದು. “ದೋ ದಿನ್ ಕಾ ಸುಲ್ತಾನ್’ ಆಗುತ್ತವೆ ಊರುಗಳು ಪ್ರತೀ ಬಾರಿ ಈ ಎರಡು ಹಬ್ಬಗಳಿಗೆ. ಹಬ್ಬಗಳ ಬಣ್ಣ ಬದಲಾದವು !
ಇದರ ಮಧ್ಯೆ ಸಣ್ಣದೊಂದು ಟಿಪ್ಪಣಿ. ಈ ಎಲ್ಲ ಹಬ್ಬಗಳ ಮಧ್ಯೆ ಊರ ಹಬ್ಬ ಎಂಬುದೊಂದಿದೆ. ಸದ್ಯಕ್ಕೆ ಅದರ ಬಣ್ಣ ಇನ್ನೂ ಮಾಸಿಲ್ಲ. ಊರಿನ ಮಂದಿಯೆಲ್ಲ ನಗರದಲ್ಲಿ ಡೇರೆ ಹಾಕಿ ಕುಳಿತರೂ ಈ ಒಂದು ದಿನಕ್ಕೆ ಮುಚ್ಚಿ ಓಡಿ ಬರುವುದಿದೆ. ಊರ ದೇವರನ್ನು ಹಬ್ಬದ ಹೆಸರಿನಲ್ಲಿ ತಲೆ ಮೇಲೆ ಹೊತ್ತು ಮೆರೆಸುವುದು ಇನ್ನೂ ನಿಂತಿಲ್ಲ. ಸಂಜೆಗೆ ಒಂದಿಷ್ಟು ತಿರುಗಾಟ, ಆಟ ಮರೆತಿಲ್ಲ. ಜಾತ್ರೆ, ಹಬ್ಬಗಳಿಗೂ ವಿಜೃಂಭಣೆಯ ಹೊಸ ಬಣ್ಣ ಬಂದಿರುವುದು ಸತ್ಯ. ಬೆಂಡು ಬತ್ತಾಸು ಜಾಗದಲ್ಲಿ ಅಮೆರಿಕನ್ ಸ್ವೀಟ್ ಕಾರ್ನ್, ಐಸ್ ಕ್ರೀಮ್ ಬಂದದ್ದೂ ಸುಳ್ಳಲ್ಲ. ಒಂದರ ಬಣ್ಣ ತಿಳಿ ಹಳದಿ. ಮತ್ತೂಂದರದ್ದು ಹಲವು. ಸರ್ಕಸ್ ಇದ್ದಲ್ಲಿಗೆ ಜಾಯಿಂಟ್ ವ್ಹೀಲ್‌ಗಳು ಅವತರಿಸಿದಾಗ ಪೇಟೆಯದ್ದು ನಿಯಾನ್ ದೀಪಗಳ ಬಣ್ಣ. ಪೇಟೆ ತಿರುಗಾಟ ಮುಗಿಸಿ ಮನೆ ಹಾದಿ ಹಿಡಿಯುವಾಗ ಹಾದಿಯ ಬಣ್ಣ ಕಪ್ಪು. ರಾಶಿ ಬೆಳಕಿನ ಮಧ್ಯೆ ಕರಗಿ ಹೋಗಿದ್ದವನಿಗೆ ಈ ಬಣ್ಣ ಹೆಚ್ಚು ಆಪ್ತ.
ಈಗ ಬದುಕು ಬದಲಾಗುತ್ತಿದೆ. ಬಣ್ಣಗಳು ಬದಲಾಗುತ್ತಿವೆ. ಹಬ್ಬಗಳು, ಸಂಭ್ರಮದ ವ್ಯಾಖ್ಯಾನ ಹಾಗೂ ಸಂಭ್ರಮಿಸುವ ಮಾದರಿ ಬದಲಾಗುತ್ತಿದೆ. ಇಂದಿನ ಮಾರುಕಟ್ಟೆ ಭಾಷೆಯಲ್ಲಿ ಹೇಳುವುದಾದರೆ ಎಲ್ಲವೂ “ಕಸ್ಟಮೈಸ್ಡ್’. ಪ್ರತಿಯೊಬ್ಬರ ಸಂಭ್ರಮಕ್ಕೂ ಬೇರೆಯದೇ ರೂಪ ಮತ್ತು ಬಣ್ಣಗಳಿವೆ. ಅವರ ಬಣ್ಣ ಇವರಿಗೆ ಹೊಂದದು. ಇವರ ರೂಪ ಅವರಿಗೆ ಒಪ್ಪುವುದು ತುಸು ಕಷ್ಟ. ಒಂದೊಂದಕ್ಕೂ ಹೆಸರಿಡುವುದೇ ಮಾರುಕಟ್ಟೆಗಳು. ಬ್ರ್ಯಾಂಡ್‌ಗಳ ಬಜಾರಿನಲ್ಲಿ ಹೋಳಿಗೂ ಹೊಸ ಬಣ್ಣ ಬಂದಿದೆ. ನವರಾತ್ರಿಯೂ ಹೊಸ ವರ್ಣ ಪಡೆದಿದೆ. ಅಷ್ಟೇ ಏಕೆ? ತಿಳಿ ಹಳದಿ (ಗೋಪಿ) ಬಣ್ಣದ ನಮ್ಮ ಮನೆಯೂ ಹಳೆಯ ಬಣ್ಣ ಬಿಸುಟಿ, ಗೋಡೆಗೊಂದು ವರ್ಣ ಬಳಿದುಕೊಂಡದ್ದೂ ಇದರ ದೆಸೆಯಿಂದಲೇ ತಾನೇ. ಈಗ ವರ್ಣಮಯ ಬದುಕು.ಯುಗಾದಿ, ದೀಪಾವಳಿಗಿಂತ ಇತರ ಆಧುನಿಕ ಹಬ್ಬಗಳದ್ದೇ ಈಗ ಹೆಚ್ಚು ವೈಭವ. ಆಫರ್‌ಗಳು, ಉತ್ಸವಗಳು, ರಿಯಾಯಿತಿಗಳ ಮಧ್ಯೆ ಪಾಯಸ, ಹೋಳಿಗೆ ಬಣ್ಣಗಳು ತೋರದಾಗಿವೆ ಏನೋ? ಅಥವಾ ಸಿಹಿ ಕಡಿಮೆಯಾಗಿದೆಯೇನೋ? ಯಾವುದೂ ತಿಳಿಯುತ್ತಿಲ್ಲ. ಆ ನದಿಯ ಮೇಲೆ ನಡೆದು ಹೋದ ಕಿಂದರಿಜೋಗಿ ಈಗ ಊರು ಗಳಿಗೆ ಬಂದಿದ್ದಾನೆ. ಅವನ ಹಿಂದೆ ನಾವು ಹೊರಟಿದ್ದೇವೆ. ನದಿಯ ಮೇಲೂ ಅವನನ್ನು ಇಲಿಗಳ ಹಾಗೆ ಹಿಂಬಾಲಿಸುತ್ತೇವೆಯೋ ಅಥವಾ ಆ ಹಳೆಯವರಂತೆ ದಡದಲ್ಲಿ ನಿಂತು ನೋಡುತ್ತೇವೆ ಯೋ? ಗೊತ್ತಿಲ್ಲ. ಇನ್ನೂ ಕಿಂದರಿಜೋಗಿಯ ಕೊಳಲು ನಿಂತಿಲ್ಲ. ಬಹಳ ಖುಷಿಯ ಸಂಗತಿಯೆಂದರೆ ಬಾಗಿಲಿನ ಹೊಸ್ತಿಲಿಗೆ ಹೂವಿನ ಹಾರ ಹಾಕುವುದು ಮರೆತಿಲ್ಲ, ಮಾವಿನ ತೋರಣ ಕಟ್ಟುವುದು ಮರೆತಿದ್ದರೂ!.
ಹಬ್ಬಗಳು ಇರುವುದು ನಮ್ಮೊಳಗೆ ಬಣ್ಣಗಳನ್ನು ತುಂಬಲಿಕ್ಕೆ. ನಾವೂ ಹಬ್ಬಗಳು ಬಂತೆಂದರೆ ಸಂಭ್ರಮಿಸುತ್ತಿದ್ದುದು ಬಣ್ಣಗಳನ್ನು ತುಂಬಿಕೊಳ್ಳಲಿಕ್ಕೆ. ಅದು ಜೀವನೋತ್ಸಾಹದ ಬಣ್ಣ.. ನೈಜ ಬದುಕಿನದ್ದೇ. ಈ ಬಣ್ಣ ಮಾತ್ರ ಗೋಸುಂಬೆಯ ರೀತಿ ಬಣ್ಣ ಬದಲಿಸುವುದಿಲ್ಲ; ಬದುಕನ್ನೇ ಬದಲಿಸುತ್ತದೆ. ಅದೇ ಸಂಸ್ಕೃತಿಯ ಬಣ್ಣ. ಇದಕ್ಕೆ ಬೇರೆ ಹೆಸರಿಲ್ಲ, ಬದುಕು ಎನ್ನುವುದು ಬಿಟ್ಟು. ಅರವಿಂದ ನಾವಡ