Advertisement
ನಿಜ ಅಲ್ವಾ? ನಿನ್ನೆ ಮೊನ್ನೆ ಈ ಫೋಟೋವನ್ನು ನೀವೂ ನೋಡಿರುತ್ತೀರಿ. ಪಕ್ಕಾ, ಇದು ನಿಮ್ಮ ವಾಟ್ಸಾಪ್, ಫೇಸ್‌ಬುಕ್‌ನಲ್ಲೂ ಮಿಂಚಿನಂತೆ ಹರಿದಾಡಿ, ಮೆರೆದಾಡಿದ ಫೋಟೋ. ನೂರಾರು, ಸಾವಿರಾರು ಸಲ ಜಿಗಿದು, ಮತ್ತೆ ಮತ್ತೆ ನಿಮ್ಮ ಕಣ್ಣಿಗೆ ಬಿದ್ದ ಫೋಟೋವೇ! ಅದರಲ್ಲಿ ಯಾವುದೇ ಅನುಮಾನವಿಲ್ಲ.ಯಾವುದೇ ಸಾಧನೆಯ ಹಿಂದೆ ಇರೋದೇ “ರಿಸ್ಕ್’ ಎಂಬ ಎರಡಕ್ಷರ. ಈ ವೆಡ್ಡಿಂಗ್ ಫೋಟೋದ ಹಿಂದೆಯೂ ಅಂಥದ್ದೇ ಕ್ರಿಯೆಟಿವ್ ರಿಸ್ಕ್ ಇತ್ತು. ಆಗಷ್ಟೇ ಮದ್ವೆಯಾದ ದಂಪತಿ, ಆಕಾಶ ನೋಡುತ್ತಾ, ಹುಣ್ಣಿಮೆ ಬೆಳದಿಂಗಳಿನಂತೆ ನಗುತ್ತಿದ್ದಾರೆ. ಅವರ ಆ ರಮ್ಯ ನೋಟ ಮೇಲಿನಿಂದ ಕ್ಲಿಕ್ಕಾಗಿದೆ. ಹಾಗೆ ಸೆರೆಹಿಡಿದಿದ್ದು, ಡ್ರೋಣ್ ಕ್ಯಾಮೆರಾದಿಂದಲೋ, ಕ್ರೇನ್‌ನಿಂದಲೋ ಅಲ್ಲವೇ ಅಲ್ಲ. ಒಬ್ಬ ಮಾಮೂಲಿ ವೆಡ್ಡಿಂಗ್ ಫೋಟೋಗ್ರಾಪರ್, ಅಕೇಶಿಯಾ ಮರ ಹತ್ತಿ ಅವರ ರಮ್ಯಚಿತ್ರವನ್ನು ಸೆರೆಹಿಡಿದಿದ್ದ!
ವಿಷ್ಣು, ತ್ರಿಶ್ಶೂರ್‌ನ ಒಬ್ಬ ವರನ ಮನೆಗೆ ಫೋಟೋ ತೆಗೆಯಲು ಹೋದಾಗ, ಸೂಕ್ತ ಲೊಕೇಶನ್‌ಗೆ ಹುಡುಕಾಡಿದನಂತೆ. ಅಲ್ಲಿ ಹೇಳಿಕೊಳ್ಳುವಂಥ, ಮನೋಹರ ವಾತಾವರಣ ಎಲ್ಲೂ ಕಾಣಿಸದೆ ತಲೆಕೆಡಿಕೊಂಡನಂತೆ. ಹತ್ತಿರದಲ್ಲಿ ಎಲ್ಲಿ ನೋಡಿದರೂ ದಟ್ಟ ಬಯಲು. ಅದೇ ಬಯಲಿನ ನಡುವೆ ಕಂಡಿದ್ದು ಕೆಲವು ಅಕೇಶಿಯಾ ಮರಗಳಷ್ಟೇ. ಅಬ್ಟಾ, ಈ ಮರಗಳಾದ್ರೂ ಇವೆಯಲ್ಲ, ಇವನ್ನೇ ಇಟ್ಟುಕೊಂಡು ಮ್ಯಾಜಿಕ್ ಮಾಡಬೇಕು ಎಂದು ದಂಪತಿಯನ್ನು ಫೋಟೋಶೂಟ್‌ಗೆ ಅಣಿಗೊಳ್ಳಲು ಸೂಚಿಸಿದ. ಈತ ಸಾಕಷ್ಟು ಬಾರಿ ಮರದ ಮೇಲೆ ಹತ್ತಿಯೇ ಫೋಟೋಗಳನ್ನು ತೆಗೆದಿದ್ದ.
Related Articles
Advertisement
ಹಾಗೆ ನೋಡಿದರೆ, ವಿಷ್ಣು ಸಾಮಾನ್ಯರಲ್ಲಿ ಸಾಮಾನ್ಯ ಫೋಟೋಗ್ರಾಫರ್ ಅಷ್ಟೇ. ವೆಡ್ಡಿಂಗ್ ಫೋಟೋಗ್ರಫಿಯನ್ನು ಈಗಷ್ಟೇ ಅರ್ಥಮಾಡಿಕೊಳ್ಳುತ್ತಿರುವ ಚಿಗುರು ಮೀಸೆಯ ಹೈದ. ಬಾಲ್ಯದಲ್ಲಿ ಮರ ಹತ್ತಿ ಹಣ್ಣು ಕೀಳುತ್ತಿದ್ದನಂತೆ ಆತ. ಮರಕೋತಿ ಆಡಿ, ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದನಂತೆ. ಬಾಲ್ಯದ ಆ ಕಲೆಯನ್ನೇ, ಫೋಟೋಗ್ರಫಿಯ ತಂತ್ರವಾಗಿಸಿ, ಮ್ಯಾಜಿಕ್ ಮಾಡಿಯೇಬಿಟ್ಟ.
ಇದರಿಂದ ನಾವು ಕಲಿಯುವುದು ಏನನ್ನು?ಈ ವೆಡ್ಡಿಂಗ್ ಫೋಟೋಗ್ರಾಫರ್ ಮಾಡಿದ್ದು ಅಂಥ ದೊಡ್ಡ ಸಾಹಸವೇನೂ ಅಲ್ಲ. ತನ್ನ ಪುಟ್ಟ ಕೆಲಸವನ್ನು, ಚೊಕ್ಕವಾಗಿ, ಕ್ರಿಯೇಟಿವ್ ಆಗಿ ಮಾಡಿ ತೋರಿಸಿದ್ದನ್ನು ನಾವ್ಯಾರೂ ಕೇವಲವಾಗಿ ಕಾಣುವಂತೆಯೂ ಇಲ್ಲ. ಅಂದರೆ, ಸಾಧನೆ ಮಾಡಲು ನಾವು ಮಾಡುವ ಕೆಲಸ ಎಂಥದ್ದು ಎಂಬುದು ಮುಖ್ಯವಲ್ಲ ಎಂಬುದು ಇಲ್ಲಿ ಸ್ಪಷ್ಟ. ನಮ್ಮ ಕೈಯಲ್ಲಿ ದುಬಾರಿ ಉಪಕರಣಗಳೇ ಬೇಕು ಅಂತಲೂ ಇಲ್ಲ. ಮೆದುಳೆಂಬ ಮಹಾಉಪಕರಣವನ್ನು ಚೆನ್ನಾಗಿ ಬಳಸಿಕೊಳ್ಳುವ ಕಲೆ ಗೊತ್ತಿರಬೇಕು. ವಿಷ್ಣು ಅದನ್ನೇ ಇಲ್ಲಿ ಮಾಡಿದ್ದು. ಕೆಲವು ಕೆಲಸ ಮಾಡುವಾಗ, ನಮ್ಮಗಳ ಬಡತನ ನೋಡಿ, ಅಕ್ಕಪಕ್ಕದವರು ನಗಬಹುದು. ಗೇಲಿ ಮಾಡಿ ಹಗುರವಾಗಿ ಕಾಣಬಹುದು. ಇಲ್ಲವೇ ಇವನ ಹಣೆಬರಹ ಇಷ್ಟೇ ಎಂದು ನಿರ್ಲಕ್ಷ್ಯವಾಗಿ ನೋಡಿಬಿಡಬಹುದು. ಅದಕ್ಕೆಲ್ಲ ತಲೆಕೆಡಿಸಿಕೊಂಡರೆ, ಈ ಮನುಷ್ಯ ಜನ್ಮದ ಅತ್ಯಮೂಲ್ಯ ಸಮಯ ವ್ಯರ್ಥವೇ ಆಗಿಹೋಗುತ್ತೆ. ಯಾವತ್ತೇ ಇದ್ದರೂ ನಿಮ್ಮನ್ನು ಕೈಹಿಡಿಯುವುದು ನಿಮ್ಮ ಕೆಲಸವೇ. ಅವರ ಬಾಯಿ ಮುಚ್ಚುವುದು ಕೂಡ ನೀವು ಮಾಡುವ ಕೆಲಸದ ಅದ್ಭುತ ಫಲಿತಾಂಶವೇ ಆಗಿರುತ್ತೆ. ಮೊದಲು ಕೆಲಸವನ್ನು ಎಂಜಾಯ್ ಮಾಡಿ, ನಂತರ ಅದರ ಮೋಡಿ ನೋಡಿ. ಪುಟ್ಟ ಕೆಲಸದಲ್ಲೂ ಗ್ರೇಟ್ ಆಗೋದಂದ್ರೆ…
1. ಇದುವರೆಗೂ ಯಾರೂ ಯೋಚಿಸದೇ ಇರೋದನ್ನು ನೀವು ಯೋಚಿಸಿ.
2. ನಿಮ್ಮ ಆಲೋಚನೆಯು ಪ್ರತಿ ವ್ಯಕ್ತಿಗಳ ಭಾವನೆಯನ್ನು ಕನೆಕ್ಟ್ ಮಾಡುವ ಹಾಗಿರಲಿ.
3. ಹೈಫೈಯಾಗಿ ಬಿಂಬಿಸಿಕೊಳ್ಳದೇ, ಇದ್ದುದರಲ್ಲಿ ಮಾಡಿ ತೋರಿಸುವ ಛಾತಿ ಬೆಳೆಸಿಕೊಳ್ಳಿ.
4. “ಸಿಂಪ್ಲಿ ಲಿವಿಂಗ್, ಹೈ ಥಿಂಕಿಂಗ್’ ಎಂಬ ಹಳೇ ಮಾತಿಗೆ, ಬಂಗಾರದ ಚೆಲುವಿದೆ ಎಂಬುದು ಗೊತ್ತಿರಲಿ.
5. ಪ್ರಚಾರಕ್ಕಾಗಿ ಏನನ್ನೂ ಮಾಡಲು ಹೋಗಬೇಡಿ, ಸಮಾಜವೇ ನಿಮ್ಮನ್ನು ಗುರುತಿಸುವ ಹಾಗೆ ಕ್ರಿಯೇಟಿವ್ ಆಗಿ ಕೆಲಸ ಮಾಡಿ.