Advertisement
ಹಿಂದೆಲ್ಲಾ ಹುಡುಗಿಯ ಒಪ್ಪಿಗೆ ಕೇಳಿ ಮದುವೆ ಮಾಡುತ್ತಿರಲಿಲ್ಲ. ಅವಳಿಗೆ ಗೊತ್ತೇ ಆಗದಂತೆ ವಧು ಪರೀಕ್ಷೆ ನಡೆಸುವುದೂ ಇತ್ತು. ನನ್ನ ಗೆಳತಿಗೂ ಹಾಗೇ ಆಯ್ತು. ಐದೂ ಮಂದಿ ಹೆಣ್ಣುಮಕ್ಕಳೇ ಇದ್ದ ಆಕೆಯ ಮನೆಯಲ್ಲಿ, ವಯಸ್ಸು ಹದಿನೆಂಟು ತುಂಬುವುದನ್ನೇ ಕಾದು ಲಗ್ನ ಮಾಡಿ ಕಳಿಸಿಬಿಡುತ್ತಿದ್ದರು. ಅವರಿಗೆಲ್ಲ ಆಯ್ಕೆ ಎನ್ನುವ ಪ್ರಶ್ನೆಯೇ ಇರಲಿಲ್ಲ. ಅಪ್ಪ ಹೇಳಿದ್ದೇ ಫೈನಲ….
Related Articles
Advertisement
ಮೊದಲೇ ಮೂಡ್ ಕೆಟ್ಟಿದ್ದ ಆಕೆ, ಊರಿಗೆ ವಿರುದ್ಧ ದಿಕ್ಕಿನ ಕಾಲು ಹಾದಿಯತ್ತ ಕೈ ತೋರಿಸಿ “ಅದೇ ದಾರಿ. ಅಲ್ಲಿಗೆ ಕಾರು ಹೋಗುವುದಿಲ್ಲ. ಇಲ್ಲೇ ನಿಲ್ಲಿಸಿ ನಡೆಯಬಹುದು; ಹತ್ತೇ ನಿಮಿಷದಲ್ಲಿ ಮನೆ ಸಿಗುತ್ತೆ’ ಎಂದಳು. ಅಷ್ಟೇ ಅಲ್ಲ, “ನೀವು ನೋಡಬೇಕು ಎಂದಿರುವ ಕನ್ಯೆಯ ಸ್ವಭಾವ ಚೆನ್ನಾಗಿಲ್ಲ. ಕೆಟ್ಟ ಗುಣ ಮತ್ತು ಉಗ್ರ ಕೋಪಿಷ್ಟೆ. ರೂಪಾನೂ ಸಾಲದು. ಕಾಡು ಕಪಿಯ ಹಾಗಿದ್ದಾಳೆ. ಅವಳನ್ನು ಈ ತನಕ ಒಬ್ರೇ ಒಬ್ರೂ ಒಪ್ಪಿಲ್ಲ’ ಎಂದಳು ಮುಗ್ಧವಾಗಿ. ಮುಖ ಮುಖ ನೋಡಿದ ಕಾರಿನ ಜನರು, ಏನು ಮಾಡುವುದು ಎಂದು ಯೋಚಿಸತೊಡಗಿದರು. ಸ್ವಲ್ಪ ದೂರದಲ್ಲಿ ನಿಂತಿದ್ದ ನಮಗೆ ವಿಷಯ ಏನೆಂದು ಸ್ಪಷ್ಟವಾಗಿ ತಿಳಿಯಲಿಲ್ಲ. ನಮ್ಮ ಪಾಡಿಗೆ ನಾವು ಮುಂದೆ ಹೋದೆವು. ಮಧ್ಯಾಹ್ನ ಕಾಲೇಜು ಮುಗಿಸಿ, ಬಿಸಿಲಿನಲ್ಲೇ ನಡೆದು ಬಂದೆವು.
ಮೊದಲಿಗೇ ಸಿಗುವ ಗೆಳತಿಯ ಮನೆಯಲ್ಲಿ ಮಜ್ಜಿಗೆ ಕುಡಿಯುವುದು ವಾಡಿಕೆ. ಮನೆಯಂಗಳದಲ್ಲಿ ಬೆಳಗ್ಗೆ ಕಾಣಿಸಿದ ಕಾರು ನಿಂತಿತ್ತು. ಒಳಗೆ ಕಾಲಿಟ್ಟಾಗ ಬೆಳಗ್ಗೆ ಕಂಡ ಮುಖಗಳು ಕಾಣಿಸಿದವು. ನಮ್ಮ ಜೊತೆಗಿದ್ದ ಗೆಳತಿ ಕಕ್ಕಾಬಿಕ್ಕಿ. ಮುಖದ ತುಂಬಾ ಅಪ್ಪನ ಮೇಲಿನ ಮುನಿಸು. ಆಕೆ ಅದೇ ಮನೆಯವಳು ಎಂದು ಅವರಿಗೆ ಅರ್ಥವಾಯಿತು. ಜೊತೆಯಲ್ಲಿ ತಾವು ನೋಡಬೇಕಿದ್ದ ಹುಡುಗಿ ಆಕೆಯೇ ಎನ್ನುವುದು ಕೂಡಾ. ಅವಳಮ್ಮ ಹಿಂದಿನ ಬಾಗಿಲಿನಿಂದ ಒಳಹೋಗಲು ಕೈ ಸನ್ನೆ ಮಾಡಿದರೂ ಲೆಕ್ಕಿಸದೆ ಎದುರಿನಲ್ಲೇ ಬಂದಳು. ಬೆಪ್ಪಾಗಿದ್ದ ಆಕೆಯನ್ನು ನೋಡಿ, ಬಂದವರು ತುಟಿ ಬಿಚ್ಚಲಿಲ್ಲ. ಮನೆಯ ಯಜಮಾನಿ ನಮ್ಮನ್ನು ಹೋಗಲು ತಿಳಿಸಿದ್ದರು. ಉಳಿದ ಕಥೆಯನ್ನು ಮರುದಿನ ಗೆಳತಿಯೇ ಹೇಳಿದಳು.
ಊಟ ಮಾಡದೆ, ಬೆವರಿಳಿಯುವ ಮುಖಕ್ಕೆ ನೀರೂ ಸೋಕಿಸದೆ, ಉಟ್ಟ ಬಟ್ಟೆಯಲ್ಲೇ ವಧು ಪರೀಕ್ಷೆಗೆ ಮೂತಿ ಊದಿಸಿ ಬಂದು ಕೂತಳು. ಬಂದ ಹಿರಿಯರು, “ನೋಡಮ್ಮ, ನಮ್ಮನೆಗೆ ಸೊಸೆಯಾಗಿ ಬರುವ ಹುಡುಗಿಗೆ ಪದವಿ ಆಗಿರಬೇಕು ಎಂದು ನಮ್ಮಾಸೆ. ಮದುವೆಯಾದ್ಮೇಲೂ ನೀನು ಓದಬಹುದು. ಮಗಳು ಬೇರೆಯಲ್ಲ; ಸೊಸೆ ಬೇರೆ ಅಲ್ಲ ನಮಗೆ’ ಎಂದರು. ತಲೆಯೆತ್ತಿ ನೋಡಿದಾಗ ನಗು ನಗುತ್ತಿದ್ದ ಮುಖಗಳು. ಅದರ ಮಧ್ಯೆ ತುಂಟನೋಟ ಬೀರುವ ಮದುವೆ ಗಂಡು. ನಾಚಿಕೆ ಅಂದ್ರೇನು ಅಂತ ಆಗ ಅವಳಿಗೆ ಅರ್ಥವಾಯ್ತು.
ವಿವಾಹ ಜರುಗಿತು. ವಧುವಿನ ಆಸೆ,ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡಿದ್ದ ಗಂಡನ ಮನೆಯವರು ಆಕೆ ಓದುವಷ್ಟೂ ಓದಿಸಿದರು. ಆದರೆ, ಗಂಡ ಮಾತ್ರ ಆಗಾಗ ಕಿಚಾಯಿಸುತ್ತಾರಂತೆ-“ಕಾಡು ಕಪಿಯನ್ನು ಮದುವೆಯಾದನಲ್ಲಾ ನಾನು’ ಅಂತ.
-ಕೃಷ್ಣವೇಣಿ ಎಂ. ಕಿದೂರು