ಬಂಟ್ವಾಳ: ಚುನಾವಣ ಸಿದ್ಧತೆಯ ಭಾಗವಾಗಿ ರಾಜ್ಯ ಬಿಜೆಪಿಯು ಮಹಾ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿದ್ದು, ರವಿವಾರ ಬಂಟ್ವಾಳ ಕ್ಷೇತ್ರದ ಎಲ್ಲಾ 249 ಬೂತ್‌ಗಳಲ್ಲೂ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಅಭಿಯಾನ ಕೈಗೊಂಡರು.
ಅಭಿಯಾನದ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ 100ನೇ ವಿಶೇಷ ಸಂಚಿಕೆಯು ಪ್ರಸಾರಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಪಾಣೆಮಂಗಳೂರು ಬೋಳಂಗಡಿಯ ಗಣೇಶ್ ಅವರ ಮನೆಯಲ್ಲಿ ಮನ್ ಕೀ ಬಾತ್ ವೀಕ್ಷಿಸಿದರು. ಕಾರ್ಯಕರ್ತರು ಕೂಡ ಆಯಾಯ ಭಾಗದಲ್ಲಿ ಮನ್ ಕೀ ಬಾತ್ ವೀಕ್ಷಿಸಿದರು. ರಾಜೇಶ್ ನಾೖಕ್ ಅವರು ಬಡಗಬೆಳ್ಳೂರು, ಪಾಣೆಮಂಗಳೂರು, ನರಿಕೊಂಬು ಗ್ರಾಮಗಳ ಬೂತಿನಲ್ಲಿ ಮನೆ ಸಂಪರ್ಕದಲ್ಲಿ ಕಾರ್ಯಕರ್ತರ ಜತೆ ಪಾಲ್ಗೊಂಡರು.
ಈ ವೇಳೆ ಅಭ್ಯರ್ಥಿ ರಾಜೇಶ್ ನಾೖಕ್ ಅವರು ಮಾತನಾಡಿ, ಬಂಟ್ವಾಳ ಕ್ಷೇತ್ರದ ಎಲ್ಲಾ 249 ಬೂತ್‌ಗಳಲ್ಲೂ ನಡೆದ ಮಹಾ ಸಂಪರ್ಕ ಅಭಿಯಾನದಲ್ಲಿ ದಾಖಲೆ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದು, ಒಂದೇ ದಿನದ ಕ್ಷೇತ್ರದ ಬಹುತೇಕ ಎಲ್ಲಾ ಮನೆಗಳನ್ನು ತಲುಪಿ ಸರಕಾರದ ಸಾಧನೆಯ ಜತೆಗೆ ಬಂಟ್ವಾಳದ ಅಭಿವೃದ್ಧಿಯನ್ನು ತಿಳಿಸಿ ಬಿಜೆಪಿಗೆ ಮತ ನೀಡುವಂತೆ ವಿನಂತಿಸಿದರು. ಪ್ರತಿ ಬೂತ್‌ಗಳಲ್ಲೂ ನೂರಾರು ಸಂಖ್ಯೆಯ ಕಾರ್ಯಕರ್ತರು ಸೇರಿ ಮನೆ ಸಂಪರ್ಕ ನಡೆಸಿರುವುದು ಕ್ಷೇತ್ರದಲ್ಲೇ ಸಂಚಲನ ಸೃಷ್ಟಿಸಿದೆ.
ಬಿಜೆಪಿಯು ಕಾರ್ಯಕರ್ತರ ಪಕ್ಷವಾಗಿದ್ದು, ಪಕ್ಷ ಗೆಲುವು ಸಾಧಿಸಿದರೆ ಅದು ಕಾರ್ಯಕರ್ತರ ಗೆಲುವು. ಕಳೆದ 5 ವರ್ಷಗಳಲ್ಲಿ ಅವರ ಬೇಡಿಕೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸಲಾಗಿದೆ, ಮುಂದೆಯೂ ಕಾರ್ಯಕರ್ತರ ವಿಶ್ವಾಸವನ್ನು ಗಳಿಸಿಕೊಂಡು ಕೆಲಸ ಮಾಡಲಾಗುತ್ತದೆ. ಕಾಂಗ್ರೆಸ್‌ನ ಎಲ್ಲಾ ಆರೋಪಗಳಿಗೂ ಉತ್ತರ ಎಂಬಂತೆ ಇಂದಿನ ಮಹಾ ಸಂಪರ್ಕ ಅಭಿಯಾನ ಮೂಡಿಬಂದಿದೆ ಎಂದರು.
ಕ್ಷೇತ್ರದ ಯಾವುದೇ ಮತದಾರರ ಗೌರವಕ್ಕೆ ಧಕ್ಕೆಯಾಗದ ರೀತಿ ಕೆಲಸ ಮಾಡಿದ್ದು, ಕಳೆದ 10 ವರ್ಷಗಳಲ್ಲಿ ನಿಮ್ಮ ಮನೆಯ ಮಗನ ರೀತಿಯಲ್ಲಿ ಜತೆಗೆ ನಿಂತಿದ್ದೇನೆ. ಮುಂದೆ ಮತ್ತೆ ನೀವು ಅವಕಾಶ ನೀಡಿದರೆ ನಿಮ್ಮ ಪ್ರತಿ ಬೇಡಿಕೆಗೆ ಸ್ಪಂದಿಸುವ ಕಾರ್ಯ ಮಾಡಲಿದ್ದೇನೆ. ಚುನಾವಣೆಗೆ ಕೆಲವೇ ದಿನಗಳಿದ್ದು, ಪ್ರತಿ ಕಾರ್ಯಕರ್ತರು ಕೂಡ ಬಿಜೆಪಿಯ ಅಭಿವೃದ್ಧಿ ಪ್ರೋಗ್ರೆಸ್ ಕಾರ್ಡ್‌ನ್ನು ಕ್ಷೇತ್ರದ ಮತದಾರರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಮಾತನಾಡಿ, ಪಕ್ಷದ ಸೂಚನೆಯನ್ವಯ 59 ಗ್ರಾಮಗಳ 249 ಬೂತುಗಳಲ್ಲಿ ಮಹಾ ಸಂಪರ್ಕ ಅಭಿಯಾನವು ಅತ್ಯಂತ ಯಶಸ್ವಿಯಾಗಿದೆ, ಅದಕ್ಕಾಗಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಪಕ್ಷದ ಜವಾಬ್ದಾರಿ ಇರುವ ಎಲ್ಲಾ ಪ್ರಮುಖರು ತಮ್ಮ ಬೂತಿನಲ್ಲಿ ಮನೆ ಸಂಪರ್ಕದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ, ಜಿಲ್ಲೆ, ಮಂಡಲ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಸಮಿತಿಯ ಎಲ್ಲಾ ಪ್ರಮುಖರು ಒಂದು ಮತಗಟ್ಟೆಯಲ್ಲಿ ಮತಯಾಚನೆ ಅಭಿಯಾನದಲ್ಲಿ ತೊಡಗಿಸಿಕೊಂಡರು. ಮಹಿಳಾ ಕಾರ್ಯಕರ್ತೆಯರು ಕೂಡ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.