ಬೆಂಗಳೂರು: ಸರ್ಕಾರಿ ಉದ್ಯೋಗಗಳ ಪ್ರಶ್ನೆಪತ್ರಿಕೆ ಬಹಿರಂಗಗೊಳಿಸುವ ಜಾಲದ ಬೇರು ಪೊಲೀಸ್ ಇಲಾಖೆವರೆಗೂ ಹಬ್ಬಿಕೊಂಡಿದೆ. ಭಾನುವಾರ ನಡೆದ ನಾಗರಿಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ನೀಡುವುದಾಗಿ ನಂಬಿಸಿ ಹಲವು ಪರೀಕ್ಷಾರ್ಥಿಗಳಿಂದ ಹಣಪಡೆದು ವಂಚಿಸಿದ ಜಾಲ ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಒಬ್ಬ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸೇರಿ 16 ಮಂದಿಯನ್ನು ಬಂಧಿಸಿದ್ದಾರೆ.
ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ ಜಾಲದಲ್ಲಿ ಇಲಾಖೆಯಲ್ಲಿನ ಕೆಲವು ಸಿಬ್ಬಂದಿ ಹಾಗೂ ಶಿಕ್ಷಕರು, ಕೋಚಿಂಗ್ ಸೆಂಟರ್‌ಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ಬಂಧನಕ್ಕೆ ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೊಲೀಸ್ ಇಲಾಖೆಯ ವೈರ್‌ಲೆಸ್ ವಿಭಾಗದ ಎಎಸ್‌ಐ ನಾಗರಾಜ್, ವಿಜಯಪುರ ಮೂಲದ ಶಿಕ್ಷಕ ಭೀಮಸಿಂಗ್ ಶಂಕರ್ ರಾಥೋಡ್, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಪ್ರಮುಖ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ಸಹಚರರಾದ ಬಸವರಾಜ, ಆತನ ಸಹೋದರ ಹೋಳಿಯಪ್ಪ ಬಂಧನಕ್ಕೊಳಗಾದ ಪ್ರಮುಖ ಆರೋಪಿಗಳು.
ಪ್ರಶ್ನೆಪತ್ರಿಕೆ ಪಡೆಯಲು ದಂಧೆಕೋರರ ಜತೆ ಸಂಪರ್ಕದಲ್ಲಿದ್ದ ಪರೀಕ್ಷಾರ್ಥಿಗಳಾದ ಜಯಶ್ರಿ ರಾಥೋಡ್, ನೀಲಮ್ಮ ಕರೆಕೊಂಡ, ಹನುಮೇಶ್, ಯುದುಕುಮಾರ್, ಕಾರ್ತಿಕ್, ಶಿವಕುಮಾರ್, ಭಾಗ್ಯವಂತ ಸಗರೆ, ಅರುಣ್ ರಾಮಪ್ಪ ಸೇರಿ 16 ಮಂದಿಯನ್ನು ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆ ನೀಡುವುದಾಗಿ ಪರೀಕ್ಷಾರ್ಥಿಗಳಿಂದ ಸಂಗ್ರಹಿಸಿದ್ದ 41.20 ಲಕ್ಷ ರೂ. ನಗದು, ಮೂರು ಲಕ್ಷ ರೂ. ಮೌಲ್ಯದ ಚೆಕ್‌ಗಳು, ಲ್ಯಾಪ್‌ಟಾಪ್, ಪ್ರಿಂಟರ್, ಹಲವು ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪಿಎಸ್‌ಐ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ನೀಡುವುದಾಗಿ ಪರೀಕ್ಷಾರ್ಥಿಗಳಿಗೆ 50ರಿಂದ 60 ಲಕ್ಷ ರೂ. ಆಮಿಷ ಒಡ್ಡಿರುವ ಜಾಲದ ಬಗ್ಗೆ ಕಳೆದ ನಾಲ್ಕೈದು ದಿನಗಳ ಹಿಂದೆ ದೊರೆತ ಖಚಿತ ಸುಳಿವಿನ ಆಧಾರದಲ್ಲಿ ಸಿಸಿಬಿ ಅಧಿಕಾರಿಗಳ ಪ್ರತ್ಯೇಕ ತಂಡಗಳು, ವಿಜಯಪುರ, ಬಾಗಲಕೋಟೆ, ನೆಲಮಂಗಲ, ಬೆಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಜಾಲದ ಸದಸ್ಯರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದ ಪರೀಕ್ಷಾರ್ಥಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಸಿಸಿಬಿಗೆ ಸುಳಿವು ದೊರೆತಿದ್ದು ಹೇಗೆ?: ಪ್ರಶ್ನೆಪತ್ರಿಕೆ ಸೋರಿಕೆ ಜಾಲದಲ್ಲಿ ಶಿಕ್ಷಕರು, ಕೆಲವು ಕೋಚಿಂಗ್ ಸೆಂಟರ್‌ಗಳು ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ಈ ನಡುವೆ, ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ನಲ್ಲಿ ಆರೋಪಿ ಸೋಮಲಿಂಗಪ್ಪ ಮೇಲಿನಮನಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಕೆಲವರು ಯತ್ನಿಸಿರುವುದು ಗೊತ್ತಾಗಿತ್ತು. ಆತ ನೀಡಿದ ಮಾಹಿತಿ ಮೆರೆಗೆ ಕಾರ್ಯಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಜಾಲದ ಪ್ರಮುಖ ಆರೋಪಿಗಳಾದ ಬಸವರಾಜ ಹಾಗೂ ಹೋಳಿಯಪ್ಪ ಇನ್ನಿತರರು ಪಿಎಸ್‌ಐ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿ ವಿಫಲರಾಗಿದ್ದಾರೆ. ಪ್ರಕರಣದಲ್ಲಿ ಪೇದೆ ರಮೇಶ್ ಸೇರಿದಂತೆ ಹಲವು ಮಂದಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.