ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಇರುವುದರಿಂದ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 750 ಬೋರ್‌ವೆಲ್‌ಗಳನ್ನು ಕೊರಿಸಲಾಗಿದ್ದು, ಅದರಲ್ಲಿ 150 ಬೋರ್‌ವೆಲ್‌ಗಳು ವಿಫಲವಾಗಿದೆ. ಟಾಸ್ಕ್ಪೋರ್ಸ್‌ನಲ್ಲಿ ಒಂದೊಂದು ತಾಲೂಕಿಗೆ ಒಂದೊಂದು ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಎಸ್‌ಜಿಆರ್‌ಎಫ್ನಲ್ಲಿ ಒಂದು ಕೋಟಿ ಅನುದಾನವನ್ನು ಗ್ರಾಮಗಳಲ್ಲಿ ಪೈಪ್‌ಲೈನ್ ಹಾಗೂ ರೀಬೋರ್ ಮಾಡಿಸುವುದು. ಹೊಸದಾಗಿ ಪೈಪ್‌ಲೈನ್ ಮಾಡುವುದು. ಹೀಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದರು.
ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡುವುದು. ಖಾಸಗಿ ತೋಟಗಳಿಂದ ನೀರನ್ನು ತೆಗೆದುಕೊಂಡು ಜನರಿಗೆ ಸಮಸ್ಯೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ 500 ರಿಂದ 600 ಬೋರ್‌ವೆಲ್‌ಗಳನ್ನು ಕೊರೆಸುವ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಬರ ಪರಿಹಾರದ ನಿಧಿ ಜಿಲ್ಲಾಧಿಕಾರಿಗಳ ಬಳಿ ಹಣವಿದೆ. ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.
ಕಳೆದ ವರ್ಷ ಕುಡಿಯುವ ನೀರಿಗೆ 53 ಕೋಟಿ ರೂ. ಮೀಸಲಿಟ್ಟಿದ್ದು, ಈ ವರ್ಷದಲ್ಲಿ ಈಗಿನ ಪ್ರಕಾರ 60 ಕೋಟಿ ರೂ.ಬೇಕಾಗಿದೆ. ಈಗಾಗಲೇ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ವಿವಿಧ ಇಲಾಖೆಗಳಿಂದ ಅಭಿವೃದ್ಧಿಗೆ 431 ಕೋಟಿ ರೂ. ಅನುದಾನ ಬಂದಿದೆ. ನೀರಾವರಿ ಸೇರಿದರೆ 500 ಕೋಟಿ ರೂ. ಆಗುತ್ತದೆ. ಶಾಶ್ವತವಾಗಿ ನೀರಾವರಿ ಯೋಜನೆಗಳಿಲ್ಲ, ಎತ್ತಿನಹೊಳೆ ಯೋಜನೆಯಿಂದ ನೀರು ಬಂದರೆ ಕೆರೆಗಳಿಗೆ ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ವಿವರಿಸಿದರು.
ಪ್ರಾಧಿಕಾರಗಳಲ್ಲಿರುವ ಕೆರೆ ಅಭಿವೃದ್ಧಿಗೆ ವಿನಿಯೋಗ ಮಾಡಲಾಗುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, 1200 ಅಡಿಗಳಷ್ಟು ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದರು. ರಾಸುಗಳಿಗೆ ಕಾಲುಬಾಯಿ ಜ್ವರದ ಚುಚ್ಚು ಮದ್ದನ್ನು ಹಾಕಿಸಲಾಗಿದೆ.
ಜಿಲ್ಲೆಯಲ್ಲಿ 86 ಸಾವಿರ ಹಸುಗಳು ಇವೆ. ವೈದ್ಯರ ಪ್ರತಿಭಟನೆ ಮುಗಿದಿದೆ. ಎಲ್ಲಡೆ ಲಸಿಕಾ ಕಾರ್ಯ ಮಾಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ, ನಾಲ್ಕು ತಾಲೂಕುಗಳ ತಹಶೀಲ್ದಾರ್‌ಗಳಿಗೆ ಬೇರೆ ಜಿಲ್ಲೆಗಳಿಂದ ಮೇವನ್ನು ತರಲು ಸೂಚಿಸಲಾಗಿದೆ. ಬರದ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.