Advertisement

HDK “ದಾರಿ ತಪ್ಪಿದ’ ಹೇಳಿಕೆ: ಇಂದು ಕಾಂಗ್ರೆಸ್‌ ರಣಕಹಳೆ

11:55 PM Apr 14, 2024 | Team Udayavani |

ಬೆಂಗಳೂರು: ಚುನಾವಣ ಪ್ರಚಾರದ ವೇಳೆ ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಗ್ಯಾರಂಟಿಗಳನ್ನು ಟೀಕಿಸುವ ಭರದಲ್ಲಿ ನೀಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಅದರಲ್ಲೂ ಆಡಳಿತಾ ರೂಢ ಕಾಂಗ್ರೆಸ್‌ಗೆ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ. ಇಡೀ ಕಾಂಗ್ರೆಸ್‌ ಪಕ್ಷ ಕುಮಾರಸ್ವಾಮಿ ಮೇಲೆ ಮುಗಿಬಿದ್ದಿದ್ದು ಚುನಾವಣೆ ಮುಗಿಯುವವರೆಗೂ ಜೀವಂತವಾಗಿಡುವ ಮೂಲಕ ಮೈತ್ರಿಕೂಟದ ವಿರುದ್ಧ ಇದನ್ನು ಅಭಿಯಾನದ ರೀತಿಯಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.

Advertisement

ಒಂದೆಡೆ ಈ ಹೇಳಿಕೆ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿ ಕೊಂಡಿದ್ದರೆ, ಮತ್ತೂಂದೆಡೆ ಕಾಂಗ್ರೆಸ್‌ ನಾಯಕರು ಚುನಾವಣ ಆಯೋಗಕ್ಕೂ ದೂರು ನೀಡಲು ನಿರ್ಧರಿಸಿದ್ದಾರೆ. ಈ ನಡುವೆ ಹೇಳಿಕೆಯನ್ನು ಖಂಡಿಸಿ ಮಂಡ್ಯ ಸಹಿತ ಹಲವೆಡೆ ಮಹಿಳೆಯರು ಬೀದಿಗಿಳಿದಿದ್ದಾರೆ.

ಮಾಜಿ ಸಿಎಂ ಹೇಳಿಕೆ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್‌, ತಾವಿದ್ದಲ್ಲಿಂದಲೇ ಝೂಮ್‌ ಮೀಟಿಂಗ್‌ ಕರೆದು ಸೋಮವಾರದಿಂದಲೇ (ಎ. 15) ಇದರ ವಿರುದ್ಧ ಜಿಲ್ಲಾ ಕೇಂದ್ರ ಗಳಲ್ಲಿ ಪ್ರತಿಭಟನೆ ನಡೆಸಲು ಸೂಚನೆ ನೀಡಿದ್ದಾರೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ಚುನಾವಣೆ ಮುಗಿಯುವವರೆಗೂ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ ಮುಂದುವರಿಯಬೇಕು ಎಂದು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಮೈಸೂರಿನಿಂದ ನಡೆಸಿದ ಝೂಮ್‌ ಮೀಟಿಂಗ್‌ನಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಸಹಿತ ಪದಾಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ರಣದೀಪ್‌ಸಿಂಗ್‌ ಸುರ್ಜೇವಾಲ, ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಡಾ| ಜಿ. ಪರಮೇಶ್ವರ, ಎಂ.ಬಿ. ಪಾಟೀಲ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಸಹಿತ ಕಾಂಗ್ರೆಸ್‌ ನಾಯಕರೆಲ್ಲರೂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾರಿ ತಪ್ಪಿದವರು ನೀವು: ಸುರ್ಜೇವಾಲ
ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಣದೀಪ್‌ಸಿಂಗ್‌ ಸುರ್ಜೇವಾಲ , ಮಿಸ್ಟರ್‌ ಕುಮಾರಸ್ವಾಮಿಯವರೇ, ನಿಜವಾಗಿಯೂ ದಾರಿ ತಪ್ಪಿದವರು ನೀವೇ ಹೊರತು ಮಹಿಳೆಯರಲ್ಲ. ಮಹಿಳೆಯರನ್ನು ಗೌರವಿಸದ ಬಿಜೆಪಿ ಜತೆ ಸಂಬಂಧ ಬೆಳೆದ ಕೂಡಲೆ ಮಹಿಳೆಯರ ನಡತೆ ಬಗ್ಗೆ ಮಾತಾಡುವಷ್ಟು ಉದ್ಧಟತನ ಬಂದಿತೆ ಕುಮಾರಸ್ವಾಮಿಯವರೇ? ಹಿಂದೆ ಸುಮಲತಾ ಅವರನ್ನು “ಎಲ್ಲಿ ಮಲಗಿದ್ದೆ ‘ ಎಂದು ಕೇಳಿದ್ದಿರಿ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ರಾಜ್ಯದ ಮಹಿಳೆಯರ ನಡತೆಗೆ ಕಪ್ಪುಚುಕ್ಕೆ ತರುವಂತಹ ಮಾತಾಡಿದ್ದೀರಿ. ಇದು ನಿಜವಾಗಿಯೂ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ “ಎಕ್ಸ್‌’ ಮೂಲಕ ತರಾಟೆಗೆ ತೆಗೆದುಕೊಂಡಿರುವ ಅವರು, ಮದ್ಯದ ಬೆಲೆಯ ಬಗ್ಗೆ ಮಾತಾಡಿ ಪುರುಷರನ್ನು ದಾರಿ ತಪ್ಪಿಸುವ ಮನೆ ಒಡೆಯುವ ಕೆಲಸ ಮಾಡಿದ್ದಾಯಿತು. ಈಗ ಗೃಹಲಕ್ಷ್ಮಿಯರ ಬಗ್ಗೆ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಿದ್ದೀರಾ? ಎಚ್‌.ಡಿ. ದೇವೇಗೌಡ ಅವರೇ, ಹೆಣ್ಣುಮಕ್ಕಳನ್ನು ಅವಮಾನಿಸುವಂತಹ ಮಾತುಗಳನ್ನಾಡಿದ ನಿಮ್ಮ ಮಗನ ಕೀಳುಮಟ್ಟದ ಹೇಳಿಕೆಗೆ ನಿಮ್ಮ ಸಹಮತವಿದೆಯೇ? ಕುಮಾರಸ್ವಾಮಿಯವರೇ ನಿಮ್ಮ ತಂದೆ ಈ ದೇಶದ ಪ್ರಧಾನಿಯಾಗಿದ್ದವರು, ಅವರಾದರೂ ನಿಮ್ಮ ಈ ನೀಚ ಮನಃಸ್ಥಿತಿಯ ಮಾತನ್ನು ಒಪ್ಪುವರೇ? ರಾಜ್ಯ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರೇ ಕುಮಾರಸ್ವಾಮಿ ನೀಡಿರುವ ಮಹಿಳೆಯರ ಬಗೆಗಿನ ಅವಹೇಳನಕಾರಿ ಹೇಳಿಕೆ ಬಗ್ಗೆ ಏನು ಹೇಳುವಿರಿ? ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರಾ? ಇಲ್ಲ ಎಂದಾದರೆ ಬಿಜೆಪಿಯ ಜತೆಗಿನ ಜೆಡಿಎಸ್‌ ಮೈತ್ರಿಯನ್ನು ಕಡಿದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.

Advertisement

ಗ್ಯಾರಂಟಿ ಪರವೋ, ವಿರುದ್ಧವೋ ಸ್ಪಷ್ಟಪಡಿಸಿ: ಕೃಷ್ಣ ಬೈರೇಗೌಡ
ಮಹಿಳೆ ದುಡಿಯದೆ ಹೋದರೆ ನಾನು, ನೀವು ಯಾರೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಅಸಂಖ್ಯಾಕ ಮಹಿಳೆಯರು ಎಲೆಮರೆಕಾಯಿಯಂತೆ ಮುಂದೆ ಬರುತ್ತಿದ್ದಾರೆ. ಗಂಡಸರು ಮಾಡಬಾರದ ಕೆಲಸ ಮಾಡಿ ಹೆಂಗಸರನ್ನು ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದು ಕೆಟ್ಟ ಮನಃಸ್ಥಿತಿ. ಒಂದು ವೇಳೆ ಇದು ಆತ್ಮವಂಚನೆಯ ಹೇಳಿಕೆ ಅಲ್ಲ ಎನ್ನುವುದಾದರೆ, ಗ್ಯಾರಂಟಿ ಯೋಜನೆಗಳನ್ನು ಅವರು ಅಧಿಕಾರಕ್ಕೆ ಬಂದಾಗ ವಜಾ ಮಾಡುತ್ತೇವೆ ಎಂದು ಹೇಳಲಿ. ನೀವು ಗ್ಯಾರಂಟಿ ಪರ ಇದ್ದೀರೋ ಅಥವಾ ವಿರೋಧ ಇದ್ದೀರೋ? ಸ್ಪಷ್ಟಪಡಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದರು.

ತಾಯಂದಿರು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ನಿಮ್ಮ ಕುಟುಂಬದಲ್ಲಿಯೂ ಸಹ ಅನೇಕ ಜನ ಹೆಣ್ಣು ಮಕ್ಕಳಿದ್ದಾರೆ. ಈ ಪದ ಬಳಕೆಯ ಮೂಲಕ ಬಿಜೆಪಿ ಸೇರಿ ಮನುವಾದಿಯಾಗಿದ್ದೀರಿ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಈ ಮಹಿಳಾ ವಿರೋಧಿ ಹೇಳಿಕೆಗೆ ಕೂಡಲೇ ಕ್ಷಮೆ ಕೋರಬೇಕು . ಉಚಿತವಾಗಿ ಅಕ್ಕಿ ನೀಡುವುದು ತಪ್ಪೇ? ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದು ತಪ್ಪೇ?
-ವಿ.ಎಸ್‌.ಉಗ್ರಪ್ಪ, ಮಾಜಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next