Advertisement

JDS: ರಾಜ್ಯ ಘಟಕ ಇಲ್ಲದ ಜೆಡಿಎಸ್‌ಗೆ ಎಚ್‌ಡಿಕೆ “ಒಂಟಿ ಸಲಗ”

10:11 PM Nov 23, 2023 | Team Udayavani |

ಬೆಂಗಳೂರು: ರಾಜ್ಯ ಘಟಕಕ್ಕೆ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರೂ ಸರಿ; ಇಲ್ಲದಿದ್ದರೂ ಸರಿ. ಜೆಡಿಎಸ್‌ ಅನ್ನು ಮುನ್ನಡೆಸುವುದು ಮತ್ತು ಸಂಘಟಿಸುವುದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಹಿತ ದೇವೇಗೌಡರ ಕುಟುಂಬಕ್ಕೆ ದೊಡ್ಡ ವಿಷಯ ಅಲ್ಲ. ಆದರೂ ಈಗಿನ ಪರಿಸ್ಥಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ರಾಜ್ಯ ಘಟಕ ಇಲ್ಲದೆ ಪಕ್ಷ ಸಂಘಟಿಸುವುದು ಒಂದಷ್ಟು ಸವಾಲಿನ ಕೆಲಸ ಎನ್ನುವುದು ಸ್ಪಷ್ಟ.

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ. ಇಬ್ರಾಹಿಂ ಸಹಿತ ಇಡೀ ರಾಜ್ಯ ಘಟಕವನ್ನು ವಿಸರ್ಜಿಸಿದ ಬಳಿಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಹಂಗಾಮಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಅವರ ಜತೆ ಕೆಲಸ ಮಾಡಬೇಕಾದ ರಾಜ್ಯ ಘಟಕದ ಪದಾಧಿಕಾರಿಗಳು ಸದ್ಯಕ್ಕೆ ಯಾರೂ ಇಲ್ಲ. ಸಂಘಟನಾತ್ಮಕವಾಗಿ ಅಧಿಕಾರಯುತ ವ್ಯವಸ್ಥೆ ಆಗಿರುವ ರಾಜ್ಯ ಕಾರ್ಯಕಾರಿ ಸಮಿತಿ ಅಸ್ತಿತ್ವದಲ್ಲಿಲ್ಲ. ಎಲ್ಲದಕ್ಕೂ ಈಗ ಕೋರ್‌ ಕಮಿಟಿಯನ್ನು ನೆಚ್ಚಿಕೊಳ್ಳಬೇಕಾಗಿದೆ. ಮುಖ್ಯವಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ನೊಗವನ್ನು ಕುಮಾರಸ್ವಾಮಿ ಒಬ್ಬರೇ ಹೊರಬೇಕಾಗಿದೆ.

ಇದಲ್ಲದೆ, ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಪಕ್ಷದಲ್ಲಿ ಮೂಡಿರುವ ಗೊಂದಲಗಳು, ಸ್ಥಳೀಯ ಮಟ್ಟದಲ್ಲಿ ಎದ್ದಿರುವ ಅಪಸ್ವರ-ಅಸಮಾಧಾನಗಳನ್ನು ಶಮನ ಮಾಡುವ ಜವಾಬ್ದಾರಿಯನ್ನು “ಹಂಗಾಮಿ’ ಅಧ್ಯಕ್ಷರೇ ನಿಭಾಯಿಸಬೇಕಾಗಿದೆ. ಪೂರ್ಣ ಪ್ರಮಾಣದಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳನ್ನು ನೇಮಿಸುವ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ರಚಿಸುವ ಅಧಿಕಾರ ರಾಷ್ಟ್ರೀಯ ಅಧ್ಯಕ್ಷರಿಗಿದೆ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಪಕ್ಷ ಸಂಘಟನೆಯ ತತ್‌ಕ್ಷಣದ ಅಗತ್ಯಗಳನ್ನು ಪೂರೈಸಿಕೊಳ್ಳಲು ತಾತ್ಕಾಲಿಕ ಮಟ್ಟಿಗೆ ಪದಾಧಿಕಾರಿಗಳ ತಂಡ ಕಟ್ಟಿಕೊಳ್ಳಲು ಹಂಗಾಮಿ ರಾಜ್ಯಾಧ್ಯಕ್ಷರಿಗೂ ಇದೆ. ಪೂರ್ಣ ಪ್ರಮಾಣದ ವ್ಯವಸ್ಥೆ ಆಗುವ ತನಕ ಹಂಗಾಮಿ ಅಧ್ಯಕ್ಷರು ಸಂಘಟನೆ ವ್ಯವಸ್ಥೆ ಮಾಡಿಕೊಳ್ಳಬಹುದು.

ಜೆಡಿಎಸ್‌ ಅಸ್ತಿತ್ವದಲ್ಲಿರುವ 6 ರಾಜ್ಯಗಳಲ್ಲಿ ಎಪ್ರಿಲ್‌-ಮೇ ತಿಂಗಳಲ್ಲಿ ಹೊಸ ಸಂಘಟನಾ ವ್ಯವಸ್ಥೆ ಬರಬೇಕಿದೆ. ಮೊದಲು ರಾಷ್ಟ್ರೀಯ ಕಾರ್ಯಕಾರಿಣಿ ರಚಿಸಿ ಅದರಲ್ಲಿ ರಾಜ್ಯ ಘಟಕಗಳ ರಚನೆ ಬಗ್ಗೆ ತೀರ್ಮಾನಿಸಲಾಗುತ್ತದೆ. ಅದರಂತೆ ಮುಂದಿನ ವರ್ಷ ಎಪ್ರಿಲ್‌-ಮೇ ವೇಳೆಗೆ ಪೂರ್ಣ ಪ್ರಮಾಣದ ರಾಜ್ಯ ಘಟಕ ರಚನೆ ಆಗಬೇಕು. ಆದರೆ ಇದೇ ವೇಳೆ ಲೋಕಸಭೆ ಚುನಾವಣೆ ಇರುವುದರಿಂದ ರಾಷ್ಟ್ರೀಯ ಕಾರ್ಯಕಾರಿಣಿ ಆಗುವುದು ಕಷ್ಟವಾದೀತು. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಂದ ಅನುಮತಿ ಪಡೆದು ಹಂಗಾಮಿ ರಾಜ್ಯಾಧ್ಯಕ್ಷರು ಪದಾಧಿಕಾರಿಗಳನ್ನು ನೇಮಿಸಿಕೊಳ್ಳಬಹುದು ಎಂದು ಜೆಡಿಎಸ್‌ ಮೂಲಗಳು ಹೇಳುತ್ತವೆ.

ಕಿರಿಕಿರಿ ಇಲ್ಲ
ಪಕ್ಷದ ಮೇಲೆ ಮೊದಲಿಂದಲೂ ದೇವೇಗೌಡರ ಕುಟುಂಬದ ಹಿಡಿತ ಇರುವುದರಿಂದ ಪದಾಧಿಕಾರಿಗಳನ್ನು ನೇಮಿಸಲು ಹಿರಿತನ-ಕಿರಿತನದ ಕಿರಿಕಿರಿ ಜೆಡಿಎಸ್‌ಗೆ ಎದುರಾಗುವುದಿಲ್ಲ. ಪಕ್ಷದಲ್ಲಿ ಹುದ್ದೆ ನೀಡುವಾಗ ಜಾತಿವಾರು ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು ಕಷ್ಟವೇನಲ್ಲ. ಜೆಡಿಎಸ್‌ನ ಭದ್ರ ನೆಲೆ ಹಳೆ ಮೈಸೂರು ಭಾಗದಲ್ಲಿ ಪಾರುಪತ್ಯ ಮುಂದುವರಿಸುವುದರ ಜತೆಗೆ ಉಳಿದ ಭಾಗಗಳಲ್ಲಿ ನಾಯಕರನ್ನು ಗುರುತಿಸಿ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ಹಂಗಾಮಿ ಅಧ್ಯಕ್ಷರಿಗೆ ಕಸರತ್ತು ಮಾಡಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next