ಬೆಳಗಾವಿ: ತಾಜ್ ವೆಸ್ಟೆಂಡ್ ಪಂಚತಾರಾ ಹೊಟೇಲ್‌ನಲ್ಲಿ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದರು.ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವಾಗ್ವಾದವೂ ನಡೆಯಿತು.
ಸಿಎಂ ಎಚ್‌ಡಿಕೆ ಅವರು ಮಾತನಾಡಿ ನಾನು ತಾಜ್ ವೆಸ್ಟೆಂಡ್‌ನಲ್ಲಿ ಒಂದು ರೂಂ ಪಡೆದಿದ್ದೇನೆ ನಿಜ. ಅದಕ್ಕೆ ಸರ್ಕಾರಿ ಹಣವನ್ನು ಬಳಸುತ್ತಿಲ್ಲ. ಯಾವೊಬ್ಬ ಅಧಿಕಾರಿಯನ್ನು ಅಲ್ಲಿಗೆ ಕರೆಸಿಕೊಂಡು ಕೆಲಸ ಮಾಡಿಲ್ಲ. ನನಗೆ ದಿನಕ್ಕೆ ಒಂದು ಗಂಟೆ ವಾಕಿಂಗ್ ಮಾಡಬೇಕು. ಕಬನ್ ಪಾರ್ಕ್, ಬೇರೆಲ್ಲಾದರೂ ಮಾಡಿದರೆ ನಾನು ಜನರಿಗೆ ನಮಸ್ಕಾರ ಕೊಟ್ಟುಕೊಂಡೇ ಇರಬೇಕಾಗುತ್ತದೆ ಎಂದರು.
ಎಲ್ಲಿಯಾದರೂ ವರ್ಗಾವಣೆ ದಂಧೆ ಸಾಬೀತು ಮಾಡಿದಲ್ಲಿ ಆರೂವರೆ ಕೋಟಿ ಜನರಿಗೆ ಹೇಳ ಬಯಸುತ್ತೇನೆ ಈ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರಿಯುವುದಿಲ್ಲ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮೂರ್‍ನಾಲ್ಕು ದಿನ ಅದೇ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದರು ಎಂದು ಟಾಂಗ್ ನೀಡಿದರು.
ಇದೇ ವೇಳೆ ಎದ್ದು ಮಾತನಾಡಿದ ಯಡಿಯೂರಪ್ಪ ಅವರು ‘ವರ್ಗಾವಣೆ ದಂಧೆ ಮಾಡಿಕೊಳ್ಳಲು ಅಲ್ಲಿದ್ದೀರಿ ಎಂದು ಜನರ ಆರೋಪ. ಅದು ನನ್ನ ಆರೋಪ ಅಲ್ಲ’ ಎಂದರು.
ನಾನು ಮುಖ್ಯಮಂತ್ರಿಯಾಗಿ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಇದ್ದೇನೆ ಅನ್ನುವುದನ್ನು ಸಾಬೀತು ಮಾಡಿದರೆ ಒಂದು ಕ್ಷಣವೂ ಶಾಸಕ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದರು.
ನಿಮ್ಮ ತಪ್ಪು ಮುಚ್ಚಿಕೊಳ್ಳಲು ನಮ್ಮ ಮೇಲೇಕೆ ಆರೋಪ ಮಾಡುತ್ತೀರಿ ಎಂದು ಕಿಡಿ ಕಾರಿದರು.