ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಮುಂದಾಗದ ಬೆನ್ನಲ್ಲೇ ಹಂಗಾಮಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಕುತೂಹಲ ಮೂಡಿಸಿದೆ. ಕುಮಾರಸ್ವಾಮಿಯವರು ರಾಮ ಲಿಂಗಾರೆಡ್ಡಿ ಯವರ ಜತೆ ಮಾತುಕತೆ ನಡೆಸಿದ ನಂತರ, ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದು ನಾನಾ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಅತೃಪ್ತರನ್ನು ಈಗಲೂ ವಾಪಸ್ ಕರೆಸಬಹುದೇ ಎಂಬ ವಿಚಾರದ ಬಗ್ಗೆ ರಾಮಲಿಂಗಾರೆಡ್ಡಿಯವರ ಜತೆ ಕುಮಾರಸ್ವಾಮಿ ಚರ್ಚಿಸಿದರು ಎಂದು ಹೇಳಲಾಗಿದೆ. ಶಾಸಕರ ರಾಜೀನಾಮೆ ಚೆಂಡು ಸ್ಪೀಕರ್ ಅಂಗಳದಲ್ಲಿರುವುದರಿಂದ ಅದು ಇತ್ಯರ್ಥವಾಗದೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗುವುದು ಅನುಮಾನ. ಹೀಗಾಗಿ, ಸ್ಪೀಕರ್ ಅನರ್ಹತೆ ತೀರ್ಮಾನ ಕೈಗೊಂಡರೆ ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಮುಸುಕಾಗಲಿದೆ. ಈ ಅಂಶವನ್ನು ಮನವರಿಕೆ ಮಾಡಿಕೊಟ್ಟು ವಾಪಸ್ ಕರೆಸುವ ಬಗ್ಗೆ ಇಬ್ಬರೂ ಚರ್ಚಿಸಿದರು. ರಾಮಲಿಂಗಾರೆಡ್ಡಿಯವರ ಮಾತನ್ನು ಬೆಂಗಳೂರಿನ ಅತೃಪ್ತ ಶಾಸಕರು ಕೇಳುವುದರಿಂದ ಮತ್ತೂಂದು ಪ್ರಯತ್ನಕ್ಕೆ ಮುಂದಾಗಲಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ, ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ, ತಕ್ಷಣಕ್ಕೆ ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ಕೆಲ ದಿನಗಳ ನಂತರ ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ಹೊಸ ಸರ್ಕಾರ ರಚನೆಯಾಗುವುದರಿಂದ ಈ ಭೇಟಿ ಮಹತ್ವ ಪಡೆದಿದೆ.
ಕೃತಜ್ಞತೆ ಸಲ್ಲಿಸಲು ಬಂದಿದ್ದೆ: ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಭೇಟಿಯಲ್ಲಿ ವಿಶೇಷ ಏನಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಮ್ಮ ಮನವಿಗೆ ಓಗೊಟ್ಟು ರಾಜೀನಾಮೆ ವಾಪಸ್ ಪಡೆದು ವಿಶ್ವಾಸಮತದಲ್ಲಿ ಪಾಲ್ಗೊಂಡು ಸರ್ಕಾರದ ಪರ ಮತ ಹಾಕಿದರು. ಹೀಗಾಗಿ, ಕೃತಜ್ಞತೆ ಸಲ್ಲಿಸಲು ಬಂದಿದ್ದೆ ಎಂದು ಹೇಳಿದರು. ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಆತುರವಾಗಿದೆ. ಆದರೆ, ಒಂದೊಮ್ಮೆ ಸರ್ಕಾರ ಮಾಡಿದರೂ ಸ್ಥಿರ ಸರ್ಕಾರ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು. ಬಿಜೆಪಿ ನಾಯಕರ ಎಲ್ಲ ಕಸರತ್ತನ್ನು ಗಮನಿಸುತ್ತಿದ್ದೇನೆ ಎಂದು ತಿಳಿಸಿದರು.
ರಾಮಲಿಂಗಾರೆಡ್ಡಿ ಮಾತನಾಡಿ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಮನವಿ ಮಾಡಿ ದ್ದರು. ನಮ್ಮ ಪಕ್ಷದ ನಾಯಕರು ಮನವೊಲಿಸಿದರು. ಹೀಗಾಗಿ, ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದಿದ್ದೆ. ಇಂದು ಮನೆಗೆ ಬಂದು ಕುಶಲೋಪರಿ ವಿಚಾರಿಸಿದರು. ರಾಜಕೀಯವಾಗಿ ಏನೂ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಕೆ ಕುರಿತು ಮಾತನಾಡಿ, ನಾಲ್ಕು ವರ್ಷಗಳಿಂದ ಒಟ್ಟಿಗೆ ಆಡಳಿತ ನಡೆಸಿದ್ದೇವೆ. ಮುಂದೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.