ಕಲಬುರಗಿ: ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೇರೂರ ಬಿ ಗ್ರಾಮದಲ್ಲಿ ಕೈಗೊಳ್ಳಬೇಕಿದ್ದ ಗ್ರಾಮ ವಾಸ್ತವ್ಯ ಕೈಗೂಡದಂತಾಗಿದೆ. ಮೊದಲ ಸಲ ಮಳೆಯಿಂದ ರದ್ದಾಗಿ ಮುಂದೂಡಿಕೆಯಾಗಿದ್ದರೆ, ಈಗ ಸಿಎಂ ಸ್ಥಾನದಿಂದಲೇ ಕೆಳಗಿಳಿದಿದ್ದರಿಂದ ಗ್ರಾಮ ವಾಸ್ತವ್ಯವೇ ಸಂಪೂರ್ಣ ರದ್ದಾದಂತಾಗಿದೆ.
ವಿಧಾನಸಭಾ ಅಧಿವೇಶನ ಸಂದರ್ಭದಲ್ಲೇ ಹೇರೂರ ಬಿ ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡುವುದಾಗಿ ಈ ಮೊದಲು ಹೇಳಿದ್ದರು. ಆದರೆ ಈಗ ಅದು ದೂರದ ಮಾತಾಗಿ ಉಳಿದಿದೆ. 12 ವರ್ಷಗಳ ಹಿಂದೆ ಮೊದಲ ಸಲ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೈಗೊಂಡಿದ್ದ ಗ್ರಾಮ ವಾಸ್ತವ್ಯ ತುಂಬಾ ಹೆಸರು ತಂದು ಕೊಟ್ಟಿತ್ತು. ಈಗ ಎರಡನೇ ಸಲ ಮುಖ್ಯಮಂತ್ರಿಯಾದ ಒಂದು ವರ್ಷದ ನಂತರ ಹೈದ್ರಾಬಾದ್-ಕರ್ನಾಟಕದಿಂದ ಗ್ರಾಮ ವಾಸ್ತವ್ಯ-2 ಆರಂಭಿಸಿದ್ದರು.
ಯಾದಗಿರಿ ಜಿಲ್ಲೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಂಡರಕಿಯಿಂದ ಕಳೆದ ಜೂ.21ರಂದು ಗ್ರಾಮ ವಾಸ್ತವ್ಯ ಆರಂಭಿಸಿ ಮರುದಿನ ಕಲಬುರಗಿ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೇರೂರ ಬಿ ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕಿತ್ತು. ಆದರೆ, ಜೂ.20ರಂದು ರಾತ್ರಿ ಮಳೆ ಸುರಿದ ಪರಿಣಾಮ ಗ್ರಾಮ ವಾಸ್ತವ್ಯ ದಿಢೀರ್ ಮುಂದೂಡಿಕೆಯಾಯಿತು.
ತದನಂತರ ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಕರೆಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಮರುದಿನ ಜೂ.27ರಂದು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ ಗ್ರಾಮ ವಾಸ್ತವ್ಯಕ್ಕೆ ಕಲಬುರಗಿ ಮಾರ್ಗವಾಗಿ ತೆರಳುತ್ತಿರುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ಸಂದರ್ಭದಲ್ಲೇ ಒಂದು ದಿನ ಹೇರೂರ ಬಿ ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಅಧಿವೇಶನ ಸಂದರ್ಭದಲ್ಲೇ ರಾಜೀನಾಮೆ ನೀಡಿ ಮಾಜಿ ಸಿಎಂ ಆಗಿದ್ದಾರೆ. ಆ ಮೂಲಕ ಹೇರೂರ ಬಿ ಗ್ರಾಮದಲ್ಲಿನ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕೈಗೂಡದಂತಾಗಿದೆ.
ಹೇರೂರ ಬಿ ಗ್ರಾಮದಲ್ಲಿನ ಸಿಎಂ ಗ್ರಾಮ ವಾಸ್ತವ್ಯ ಮುಂದೂಡಿಕೆಯಾದ ಸಂದರ್ಭದಲ್ಲೇ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಮುಂದೂಡಿಕೆ ಬದಲು ರದ್ದು ಎಂದೇ ಹೇಳಲಾಗಿತ್ತು. ಕೊನೆಗೂ ಈಗ ಗ್ರಾಮ ವಾಸ್ತವ್ಯ ಶಾಶ್ವತವಾಗಿ ರದ್ದಾಗಿದೆ. ಕೊನೆಗೂ ಕುಮಾರಸ್ವಾಮಿ ಅವರ “ಸಿಎಂ ಗ್ರಾಮ ವಾಸ್ತವ್ಯ’ಕ್ಕೆ ಅಂಕುಶ ಬಿದ್ದಿದೆ.
ಹೇರೂರಲ್ಲಿ ವಿಜಯೋತ್ಸವ: ವಿಧಾನಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗುತ್ತಿದ್ದಂತೆ ಮಂಗಳವಾರ ರಾತ್ರಿ ಕಲಬುರಗಿ ತಾಲೂಕು ಹೇರೂರ ಬಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಿಜೆಪಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕುಮಾರಸ್ವಾಮಿಯವರು ಹೇರೂರ ಬಿ ಗ್ರಾಮಕ್ಕೆ ಬಂದು ಹೋದ 2 ತಿಂಗಳ ನಂತರ ಅಧಿಕಾರದಿಂದ ಕೆಳಗಿಳಿದಿದ್ದರೆ ಬೇಸರ ಎನಿಸುತ್ತಿರಲಿಲ್ಲ. ಗ್ರಾಮಕ್ಕೆ ಬಂದು ಏನಾದರೂ ಭರವಸೆ ನೀಡಿದ್ದರೆ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುತ್ತಿದ್ದವು. ಒಟ್ಟಾರೆ ನಮ್ಮೂರಿಗೆ ಸಿಎಂ ಬರುವ ಭಾಗ್ಯವಿಲ್ಲ. ನಮ್ಮೂರಿನ ಗ್ರಾಮ ವಾಸ್ತವ್ಯ ಮುಂದೂಡಿಕೆಯಾದ ದಿನದಿಂದ ಇಂದಿನ ದಿನದವರೆಗೂ ಒಬ್ಬನೇ ಒಬ್ಬ ಅಧಿಕಾರಿ ಹೇರೂರ ಬಿ ಗೆ ಬಂದಿಲ್ಲ.
-ಭೀಮಾಶಂಕರ ಹೂಗಾರ, ಹೇರೂರ ಬಿ ಗ್ರಾಮದ ಯುವಕ