Advertisement

ಎಚ್‌ಡಿಕೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿ

06:05 PM Apr 16, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ನಂತರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್‌ ಮೈತ್ರಿ ಬಿಟ್ಟು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಉತ್ತಮ. ಅಗತ್ಯವಿದ್ದರೆ ಬಿಜೆಪಿ ಜತೆ ಮೈತ್ರಿಗೆ ನಾನೇ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಆರ್‌ಪಿಐ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿಯವರು ಕಣ್ಣಿರು ಹಾಕುತ್ತಾ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಬದಲು ಬಿಜೆಪಿ ಸೇರಿ ನಗುತ್ತಾ ಉಪ ಮುಖ್ಯಮಂತ್ರಿಯಾಗಿರುವುದೇ ಉತ್ತಮ. ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ, ಇಲ್ಲಿಯೂ ಬಿಜೆಪಿ ಆಡಳಿತವಿರಬೇಕು ಎಂದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ಉತ್ತಮ ಆಡಳಿತ ನೀಡಿದೆ. ಹೀಗಾಗಿ, ಮೋದಿ ಅವರನ್ನು ಮತ್ತೂಂದು ಅವಧಿಗೆ ಆಯ್ಕೆ ಮಾಡುವ ಉದ್ದೇಶದಿಂದ ಬಿಜೆಪಿಯನ್ನು ಬೆಂಬಲಿಸಲು ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ ನಿರ್ಧರಿಸಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾದಿಂದ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದು, ಇನ್ನುಳಿದ 24 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಾಗುವುದು ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾಗೆ ಅವಕಾಶ ನೀಡುವಂತೆ ಬಿಜೆಪಿಯನ್ನು ಕೇಳಲಾಗಿತ್ತು. ಆದರೆ, ಈ ಕುರಿತು ಯಾವುದೇ ಬೆಂಬಲವನ್ನು ಬಿಜೆಪಿ ನೀಡಲಿಲ್ಲ.

Advertisement

ಹೀಗಾಗಿಯೇ, ಆರ್‌ಪಿಐ ಪಕ್ಷದಿಂದ ಕೋಲಾರ (ಮೀಸಲು)-ವೆಂಕಟೇಶಪ್ಪ, ಬೆಂಗಳೂರು ಗ್ರಾಮಾಂತರ- ಡಾ.ಎಂ.ವೆಂಕಟಸ್ವಾಮಿ, ಚಿಕ್ಕೋಡಿ-ಗೌಸ್‌ ಮುದ್ದೀನ್‌ ಇಸ್ಮಾಯಿಲ್‌ ಮಗದುಮ್‌, ಬೆಳಗಾವಿ- ದಿಲ್‌ಶಾದ್‌ ಸಿಕಂದರ್‌ ತಹಸೀಲ್ದಾರ್‌ ಅವರು ಸ್ಪರ್ಧಿಸಿದ್ದಾರೆ ಎಂದು ಹೇಳಿದರು.

ರಾಹುಲ್‌ ಕನಸು: ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ಆಗುವ ಕನಸು ಕಾಣಬಾರದು. ಏಕೆಂದರೆ, ನರೇಂದ್ರ ಮೋದಿ ಇರುವವರೆಗೂ ಅವರು ಪ್ರಧಾನಿ ಆಗಲು ಸಾಧ್ಯವಿಲ್ಲ. ಇನ್ನು, ಮಹಾಘಟಬಂಧನ್‌ ಬರೀ ಬಾಯಿ ಮಾತು.

ಇದರಲ್ಲಿ ಬಿಎಸ್‌ಪಿಯಿಂದ ಮಯಾವತಿ, ಎಸ್‌ಪಿಯಿಂದ ಮುಲಾಯಂ ಸಿಂಗ್‌, ಟಿಎಂಸಿ ಪಕ್ಷದಿಂದ ಮಮತಾ ಬ್ಯಾನರ್ಜಿ, ಆರ್‌ಜೆಡಿಯಿಂದ ಲಾಲೂ ಪ್ರಸಾದ್‌ ಯಾದವ್‌ ಸೇರಿದಂತೆ ಬಹುತೇಕ ನಾಯಕರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಎ.ವೆಂಕಟಸ್ವಾಮಿ, ಬಿಜೆಪಿ ವಕ್ತಾರ ಆನಂದ್‌, ವೈ.ಎಸ್‌.ದೇವುರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next