ಬೆಂಗಳೂರು: ವಿಧಾನಸಭಾ ಕಲಾಪಕ್ಕೆ ಆಗಮಿಸಿದ ಜೆಡಿಎಸ್ ನಾಯಕ,ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಮಾಧ್ಯಮಗಳ ಎದುರು ಕಿಸೆಯಿಂದ ಪೆನ್ ಡ್ರೈವ್ ತೆಗೆದು ತೋರಿಸಿ ರಾಜ್ಯ ಕಾಂಗ್ರೆಸ್ ಸರಕಾರದ ಅಕ್ರಮಗಳನ್ನು ಬಯಲು ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
”ಪೆನ್ ಡ್ರೈವ್ ನಲ್ಲಿ ಅಕ್ರಮದ ಎಲ್ಲಾ ದಾಖಲೆ ಇದೆ. ಸರಿಯಾದ ಸಮಯಕ್ಕೆ ಬಯಲು ಮಾಡುತ್ತೇನೆ. ನಾನು ಸುಮ್ಮನೆ ಚರ್ಚೆ ಮಾಡುವುದಿಲ್ಲ.ಎಲ್ಲವೂ ಸಿದ್ಧವಾಗಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
”ಇಂಧನ ಇಲಾಖೆಯಲ್ಲಿ ತಲಾ ಹತ್ತು ಕೋಟಿ ರೂ.ಗಳಿಗೆ ವರ್ಗಾವಣೆಯಾಗಿದೆ. ಆ ಅಧಿಕಾರಿ ದಿನಕ್ಕೆ ಐವತ್ತು ಲಕ್ಷ ರೂ. ಕಮಿಷನ್ ಹೊಡೆಯುತ್ತಾನೆ” ಎಂದು ಗಂಭೀರ ಆರೋಪ ಮಾಡಿದರು.
”ಮಂಡ್ಯದಲ್ಲಿ ವರ್ಗಾವಣೆ ಆಯಿತು, ತನಿಖೆಯಾದವರನ್ನು, ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಂಡಿದ್ದಾರೆ. ಲಾಟರಿ ದಂಧೆ ನಡೆಸಿದವರನ್ನು ಹೊರ ಕಳುಹಿಸಿದವನು ನಾನು. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ವರ್ಗಾವಣೆ ದಂಧೆಯದ್ದೇ ಪೆನ್ ಡ್ರೈವ್ ನನ್ನ ಬಳಿ ಇದೆ” ಎಂದು ಪರೋಕ್ಷವಾಗಿ ಚೆಲುವರಾಯ ಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
”ಈ ಸರ್ಕಾರದಲ್ಲಿ ‘ನಗದು ಅಭಿವೃದ್ಧಿ ಇಲಾಖೆ’ ಇದೆ ಎಂದು ಯಾರೋ ಹೇಳಿದ್ದಾರೆ. ನಗರಾಭಿವೃದ್ಧಿ ಇಲಾಖೆ ಬಗ್ಗೆ ಗೊತ್ತು.ಆಮೇಲೆ ಅದು ಏನೆಂದು ಗೊತ್ತಾಯಿತು” ಎಂದು ಸರಕಾರದ ವಿರುದ್ಧ ವ್ಯಂಗ್ಯವಾಡಿದರು.
ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಹಾಗೇ ಇದ್ದೇನೆ. ಬೇಕಾದರೆ ಕಾಂಗ್ರೆಸ್ ನವರು ನನ್ನ ಆಸ್ತಿಯ ಕುರಿತು ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.