ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಕ್ಷೇತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಅಲ್ಲ. ಅವರು ರಾಜಕೀಯರಂಗಕ್ಕೆ ನಿವೃತ್ತಿ ಪ್ರಕಟಿಸಿ, ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಳ್ಳಲಿ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
80ನೇ ವರ್ಷಕ್ಕೆ ಹೆಜ್ಜೆಯಿರಿಸಿದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ತಮ್ಮ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲು ಹೊರಟಿರುವ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಆಡಳಿತದಲ್ಲಿ ಕನ್ನಡ ಸಂಕಷ್ಟಕ್ಕೆ ಸಿಲುಕಿದೆ. ಕನ್ನಡ ಭಾಷೆಯನ್ನು ರಕ್ಷಿಸಬೇಕಾದ ಸರ್ಕಾರ ಇಂಗ್ಲಿಷ್ ಭಾಷೆಗೆ ಮಣೆಹಾಕುತ್ತಿದೆ. ಕನ್ನಡ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದ ಪ್ರಯೋಗ ಶಾಲೆ ಮಾಡಲು ಹೊರಟಿದ್ದು, ಇದರಿಂದಾಗಿ ಹಳ್ಳಿ ಪ್ರದೇಶದ ಬಡ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದೊಂದು ದಿನ ಅವರು ಇತ್ತ ಕನ್ನಡವನ್ನು ಕಲಿಯಲಾಗದೇ ಅತ್ತ ಇಂಗ್ಲಿಷ್ ಕೂಡ ಸರಿಯಾಗಿ ಕಲಿಯಲಾಗದ ಸನ್ನಿವೇಶ ನಿರ್ಮಾಣವಾಗಲಿದೆ ಎಂದರು.
ಜನಾಂದೋಲನ ನಡೆಯಬೇಕಾಗಿದೆ: ಪ್ರಾದೇಶಿಕ ಪಕ್ಷದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಾದೇಶಿಕ ಭಾಷೆಯನ್ನು ಉಳಿಸಿ-ಬೆಳೆಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಯಾವ ಸಾಧನೆಗಾಗಿ ಅವರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ. ಈ ಬಗ್ಗೆ ಜನಾಂದೋಲನವಾಗಬೇಕಾಗಿದ್ದು, ಹೊಸ ಪೀಳಿಗೆ ಈ ಆಂದೋಲನದ ಸಾರಥ್ಯ ವಹಿಸಿಕೊಳ್ಳಲಿ, ನಾನು ಕೂಡ ಇದರಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.
ಸರ್ಕಾರಕ್ಕೆ ಮಾತಿನ ಚಾಟಿ: ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಕನ್ನಡ ನಾಡು-ನುಡಿ ವಿಚಾರದಲ್ಲಿ ಚಂಪಾ ಅವರ ಹೋರಾಟ ಯುವ ಸಮುದಾಯಕ್ಕೆ ಪ್ರೇರಣೆ. ಯಾರ ಮುಲಾಜಿಗೂ ಒಳಗಾಗದ ಇವರ ಮಾತುಗಳು ಹಳಿ ತಪ್ಪಿದ ಸರ್ಕಾರಗಳಿಗೆ ಮತ್ತು ಮಠಾಧೀಶರಿಗೆ ಚಾಟಿ ಎಟಿನಂತಿರುತ್ತವೆ ಎಂದರು.
ಮಾಜಿ ಶಾಸಕ ಬಿ.ಆರ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕನ್ನಡ ಪರ ಹೋರಾಟಗಾರ ಎಂ.ತಿಮ್ಮಯ್ಯ, ಪ್ರೊ.ಚಂದ್ರಶೇಖರ ಪಾಟೀಲ ಅಭಿಮಾನಿಗಳ ಬಗಳದ ವ.ಚ.ಚನ್ನೇಗೌಡ ಮತ್ತಿತರರು ಇದ್ದರು. ಇದೇ ವೇಳೆ ಚಂದ್ರಶೇಖರ ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.