Advertisement

ಸಭೆ ನಡೆಸಿದ ಸಂಸದರ ನಡೆಗೆ ಎಚ್‌ಡಿಕೆ ಸಿಡಿಮಿಡಿ

04:10 PM Sep 21, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ರಾಜಕೀಯ ಮತ್ತು ಅಧಿಕಾರದ ಪ್ರಭಾವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್‌-ಕಾಂಗ್ರೆಸ್‌ ನಡುವೆ ತಿಕ್ಕಾಟ ಮತ್ತೆ ತಾರಕಕ್ಕೇರಿದೆ. ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಂಸದ ಡಿ.ಕೆ.ಸುರೇಶ್‌ ಉದ್ದೇಶಕ್ಕೆ ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಶಾಸಕರ ಹಕ್ಕು ಮೊಟಕುಗೊಳಿಸುವ ಸಭೆಗಳನ್ನು ಸಂಸದರು ಆಯೋಜಿಸುತ್ತಿದ್ದಾರೆ ಎಂದು ಚನ್ನಪಟ್ಟಣ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ವಿಧಾನಸಭೆ ಸ್ಪೀಕರ್‌ರಿಗೆ ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಸೋಮವಾರ ನಡೆದ ವಿಧಾನಸಭಾ ಕಲಾಪದಲ್ಲೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದು, ರಾಜ್ಯದಲ್ಲಿ ಅಧಿಕಾರಿಗಳ ಸಭೆ ನಡೆಸುವ ವಿಚಾರದಲ್ಲಿ ಶಾಸಕರು, ಸಂಸದರು, ಎಂಎಲ್‌ಸಿಗಳ ಹಕ್ಕು, ಅಧಿ ಕಾರ ವ್ಯಾಪ್ತಿಯನ್ನು ನಿರ್ಣಯಿಸುವ ವಿಷಯಕ್ಕೆ ಪುನಃ ಚಾಲನೆ ದೊರೆತಂತಾಗಿದೆ.

ಸಂಸದರ ನಡೆಯಿಂದ ಶಾಸಕರ ಹಕ್ಕುಚ್ಯುತಿ ಆರೋಪ: ಸೆ.13ರಂದು ಸಂಸದ ಡಿ.ಕೆ.ಸುರೇಶ್‌ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ರಾಮನಗರ ನಗರಸಭೆ ಅಧಿಕಾರಿಗಳ ಸಭೆಯನ್ನು ಸೆ.20ರಂದು, ಚನ್ನಪಟ್ಟಣ ನಗರಸಭೆ ಅಧಿಕಾರಿಗಳ ಸಭೆಯನ್ನು ಸೆ.22ರಂದು ಆಯೋಜಿಸುವಂತೆ ಪತ್ರ ಬರೆದಿದ್ದರು. ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ನಗರೋತ್ಥಾನ ವಿವರ, 15ನೇ ಹಣಕಾಸು ಯೋಜನೆ, ಇ-ಖಾತಾ ವಿಚಾರ, ವಸತಿ ಯೋಜನೆ, ರೈಲ್ವೆ ಯೋಜನೆ, ಹೊಸ ಕಾಮಗಾರಿ ಮತ್ತು ನಿರ್ವಹಣೆ ವಿವರಗಳ ಬಗ್ಗೆ ಚರ್ಚಿಸಲು ಉದ್ದೇಶಿಸಿದ್ದು, ಅಧಿಕಾರಿಗಳು ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸೂಚಿಸಲು ಮನವಿ ಮಾಡಿದ್ದರು.

ಸಂಸದರ ಈ ಸಭೆಗಳಿಗೆ ತಮಗೆ ಆಹ್ವಾನ ಇಲ್ಲವೆಂದು, ಶಾಸಕರ ಅನುಪಸ್ಥಿತಿಯಲ್ಲಿ ಈ ಸಭೆ ಆಯೋಜಿಸಲು ಬರುವುದಿಲ್ಲವೆಂದು ಎಚ್‌.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರು ಡೀಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ವಿಧಾನಸಭೆ ಸ್ಪೀಕರ್‌ರಿಗೆ ಶಾಸಕರ ಹಕ್ಕು ಚ್ಯುತಿಯಾಗುತ್ತಿದೆ ಎಂದು ದೂರಿದ್ದರು.

ಇದನ್ನೂ ಓದಿ:ಉತ್ತರ ಗೋವಾದ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭೇಟಿ

Advertisement

ಸಭೆಯ ಸ್ವರೂಪ, ಸ್ಥಳ ಬದಲಾವಣೆ: ಈ ಬೆಳವಣಿಗೆ ಯಾದ ನಂತರ ಸಂಸದರು ರಾಮನಗರ ಮತ್ತು ಚನ್ನ ಪಟ್ಟಣ ನಗರಸಭೆಗಳಲ್ಲಿ ಸಭೆ ಆಯೋಜಿಸುವುದರ ಬದಲಿಗೆ ಸೆ.20ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿ ಎಂದು ಡೀಸಿಗೆ ಸೂಚಿಸಿ ಪತ್ರ ಬರೆದಿರು. ಸಭೆಗಳ ಸ್ಥಳ ಮತ್ತು ಸ್ವರೂಪವೇ ಬದಲಾಗಿತ್ತು. ರಾಜೀವ್‌ ಗಾಂಧಿ ವಸತಿ ನಿಗಮ, ಜಿಲ್ಲಾ ನಗರಾಭಿ ವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸೌತ್‌ ವೆಸ್ಟ್ರನ್‌ ರೈಲ್ವೆಯ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಮನಗರ ನಗರಸಭೆಯ ಪೌರಾಯುಕ್ತರು, ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಅಭಿ ಯಂತರರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಅಭಿಯಂತರರು, ರಾಮನಗರ ತಹಶೀಲ್ದಾರ್‌ರು, ರಾಮನಗರ ವಿಭಾಗದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಸಭೆಯನ್ನು ಸಂಸ ದರು ಆಯೋಜಿಸಿದ್ದರು.

ರಾಜಕೀಯ ವೈರಿಗಳು ಮಿತ್ರರಾದರು, ಈಗ ಮತ್ತೆ ಬಿರುಕು?:
ತಮ್ಮ ಗಮನಕ್ಕೆ ಬಾರದೆ ತಮ್ಮ ವ್ಯಾಪ್ತಿಯ ವಿಷಯಗಳ ಚರ್ಚೆಗೆ ಲೋಕಸಭಾ ಸದಸ್ಯರು ಸಭೆ ಆಯೋಜಿಸುವುದು ಸರಿಯಲ್ಲ ಎಂಬುದು ಚನ್ನಪಟ್ಟಣ ಮತ್ತು ರಾಮನಗರ ಶಾಸಕರ ವಾದ. 2018ರ ಸಾರ್ವ ತ್ರಿಕ ಚುನಾವಣೆ ವೇಳೆ ವೈರತ್ವ ಮರೆತು ಮಿತ್ರರಾದ ಎಚ್‌ ಡಿಕೆ ಮತ್ತು ಡಿ.ಕೆ.ಸಹೋದರರು, ಇದೀಗ ಇಬ್ಬರ ನಡುವೆ ಪುನಃ ಬಿರುಕು ಸ್ಪಷ್ಟವಾಗಿ ಗೋಚರಿಸಿದೆ.

ಸಂಸದರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ
ರಾಮನಗರ:
ಶಾಸಕರ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ ಎಂಬ ಆರೋಪಗಳ ನಡುವೆ ಸಂಸದ ಡಿ.ಕೆ. ಸುರೇಶ್‌ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಸತಿ ಯೋಜನೆಗೆ ಕೇಂದ್ರ ಸರ್ಕಾರ ದಿಂದ ಬರಬೇಕಾದ ಬಾಕಿ ಅನುದಾನ, ಕೊತ್ತಿಪುರ ದಲ್ಲಿ ಮನೆಗಳ ನಿರ್ಮಾಣ, ಶಾಶ್ವತ ಕುಡಿಯುವ ನೀರಿನ ಯೋಜನೆ, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ನಿರ್ವಹಣೆ, ನಗರೋತ್ಥಾನ ಯೋಜನೆಗಳ ಪ್ರಗತಿ, ರಾಮನಗರ ಮತ್ತು ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ರೈಲ್ವೆ ಕ್ರಾಸಿಂಗ್‌ ಮತ್ತು ರೈಲ್ವೆ ಸೇತುವೆ ವಿಚಾರದಲ್ಲಿ ಚರ್ಚೆಗಳಾಗಿವೆ ಎಂದು ಗೊತ್ತಾಗಿದೆ. ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಕಷ್ಟವಾಗುತ್ತದೆ ಎಂದು ಎರಡೂ ನಗರಸಭೆಗಳ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆ ಈ ರಸ್ತೆಗಳನ್ನು ಪಿಡಬ್ಲ್ಯುಡಿ ವ್ಯಾಪ್ತಿಗೆ ತರಲು ಸರ್ಕಾರಕ್ಕೆ ಮನವಿ ಮಾಡಿ ಎಂದು ಸಂಸ ದರು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಕುಡಿ ಯುವ ನೀರಿನ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಎಂದು ಸಂಸದರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡೀಸಿ ಕಚೇರಿಯಲ್ಲಿ ನಗರಸಭಾ ಸದಸ್ಯರ ಸಭೆ
ರಾಮನಗರ:
ಸ್ಥಳೀಯ ನಗರಸಭೆಯ ಕಾಂಗ್ರೆಸ್‌ ಸದಸ್ಯರು ಸಂಸದ ಡಿ.ಕೆ.ಸುರೇಶ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಾವು ನಗರಸಭೆಗೆ ಚುನಾಯಿತರಾಗಿದ್ದು, ಇನ್ನು ಕೌನ್ಸಿಲ್‌ ರಚನೆಯಾಗಿಲ್ಲ, ಹಾಗಂತ ತಮ್ಮ ವಾರ್ಡುಗಳ ಸಮಸ್ಯೆಗಳಿಗೆ ಸ್ಪಂದಿಸದೆ ಇರುವಂತಿಲ್ಲ. ಸಮಸ್ಯೆಗಳ ನಿವಾರಣೆಗೆ ನಗರಸಭೆ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ಸದಸ್ಯರು ದೂರಿದ್ದಾರೆ ಎಂದು ಗೊತ್ತಾಗಿದೆ. ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ, ಇ-ಖಾತೆ, ರಸ್ತೆಗಳ ದುರಸ್ಥಿ, ಅಧಿಕಾರಿಗಳ ನಿರ್ಲಕ್ಷ ಹೀಗೆ ಅನೇಕ ವಿಚಾರಗಳ ಬಗ್ಗೆ ಸದಸ್ಯರು ಡೀಸಿ ಬಳಿ ದೂರಿದ್ದಾರೆ. ನಗರ ವ್ಯಾಪ್ತಿಯಲ್ಲಿ ಯುಜಿಡಿ ನಿರ್ವಹಣೆ ವಿಳಂಬವಾಗು ತ್ತಿದೆ. ಅಗತ್ಯ ಪರಿಕರ ಇನ್ನು ಅಗತ್ಯವಿದೆ. ಸಿಬ್ಬಂದಿ ಕೊರತೆ ನೀಗಿಸಿ ಎಂದು ಸದಸ್ಯರು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಇಟ್ಟರು. ಸದಸ್ಯರ ದೂರು ಆಲಿಸಿದ ಡೀಸಿ ಕೆಲ ವಿಚಾರಗಳಲ್ಲಿ ನಗರಸಭೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ನಗರಸಭಾ ಆಯುಕ್ತ ನಂದಕುಮಾರ್‌, ಇತರ ಅಧಿಕಾರಿಗಳು ಇದ್ದರು. ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್‌ ಇನ್ನು ರಚನೆಯಾಗಿಲ್ಲ. ಹೀಗಾಗಿ ಸದ್ಯ ನಗರಸಭೆಗೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದು, ಅವರ ಬಳಿ ತಮ್ಮ ಸಮಸ್ಯೆತೋಡಿಕೊಂಡಿರುವುದಾಗಿ ಸದಸ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next