Advertisement

ಶ್ರೀ ನಂಜುಂಡೇಶ್ವರನ ಶಾಪ ತಟ್ಟದೆ ಇರದು..: ಬಿಜೆಪಿ ಶಾಸಕನ ವಿರುದ್ಧ ಎಚ್ ಡಿಕೆ ವಾಗ್ದಾಳಿ

12:06 PM Apr 04, 2023 | Team Udayavani |

ಬೆಂಗಳೂರು: ನಾಡಿಗೆ ನಾಡೇ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವರ ಹುಂಡಿಗೆ ಬಿಜೆಪಿ ಶಾಸಕ ಬಿ.ಹರ್ಷವರ್ದನ್‌ ಅವರು  ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸ್ವಯಂ ಘೋಷಿತ ಧರ್ಮೋದ್ಧಾರಕರು, ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದು ಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ. ಇವರಿಗೆ ನಾಚಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.

ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೆ ಬಳಸಬೇಕು ಎನ್ನುವುದು ಕಾನೂನು. ಬಿಜೆಪಿ ಸರಕಾರ ಕಾನೂನನ್ನು ಗಾಳಿಗೆ ಬಿಟ್ಟು, 40%ಗಾಗಿ ದೇವರ ದುಡ್ಡನ್ನೇ ನುಂಗಿನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ. ಪಾಪದ ಪಕ್ಷಕ್ಕೆ ಪ್ರಾಯಶ್ಚಿತ್ತ ತಪ್ಪದು.. ಶ್ರೀ ನಂಜುಂಡೇಶ್ವರನ ಶಾಪವೂ ತಟ್ಟದೆ ಇರದು ಎಂದಿದ್ದಾರೆ.

ಹೇಳುವುದು ಒಂದು, ಮಾಡುವುದು ಇನ್ನೊಂದು. ಧರ್ಮ, ದೇವರು ಎನ್ನುವುದು ಬಿಜೆಪಿಗೆ ಮತಫಸಲು ಕೊಡುವ ಸಾಧನಗಳಷ್ಟೇ. ಶ್ರದ್ಧೆ, ಭಕ್ತಿ ಜನರದ್ದು; ಭುಕ್ತಿ ಮಾತ್ರ ಬಿಜೆಪಿಯದ್ದು. ನೀಚತನದ ಪರಮಾವಧಿ ಇದು. ಸಮುದಾಯ ಭವನಗಳ ನಿರ್ಮಾಣಕ್ಕೆ ದೇವರ ದುಡ್ಡೇ ಬೇಕೆ? ಕೇತ್ರಕ್ಕೆ ಸರಕಾರ ಕೊಟ್ಟ ಹಣ, ಶಾಸಕರ ವಿಶೇಷ ಅನುದಾನ ಇತ್ಯಾದಿಗಳೆಲ್ಲ ಎಲ್ಲಿ ಹೋದವು? ರಾಜ್ಯ ಸರಕಾರವು ಶ್ರೀ ನಂಜುಂಡೇಶ್ವರ ದೇವರ ಹುಂಡಿಯನ್ನು ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಬೇಕು. ಈ ಬಗ್ಗೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ದೇವರ ದುಡ್ಡನ್ನು ದೇವಾಲಯದ ಅಭಿವೃದ್ಧಿಗೇ ಬಳಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next