ಬೆಂಗಳೂರು: ಕುಮಾರಸ್ವಾಮಿ ಕಿಂಗ್ ಮೇಕರ್ ಆಗುವ ಹುಮ್ಮಸ್ಸಿನಲ್ಲಿದ್ದರು. ಆದರೆ ಲೆಕ್ಕಾಚಾರ ತಲೆಕೆಳಗಾಗಿದ್ದರಿಂದ ಅಧಿಕಾರ ಸಿಗದೆ ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದರು.
ಕಾಂಗ್ರೆಸ್ ಭವನದದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಕಿಂಗ್‌ಮೇಕರ್ ಆಗುವ ನಿರೀಕ್ಷೆಯಲಿದ್ದರು. ನನ್ನ ಅಧ್ಯಕ್ಷತೆಗೆ ಜನ 136 ಸ್ಥಾನ ನೀಡಿದ್ದರೆ, ಅವರಿಗೆ 19 ಸ್ಥಾನ ಕೊಟ್ಟಿದ್ದಾರೆ. ಇದರಿಂದ ಹತಾಶರಾಗಿ ಅಧಿಕಾರ ಸಿಗದೆ ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಸೂಯೆಗೆ ಎಲ್ಲಾದರೂ ಮದ್ದು ಇದೆಯೇ? ತಮ್ಮ ರಾಜೀನಾಮೆಗೆ ಕುಮಾರಸ್ವಾಮಿ ಒತ್ತಾಯಿಸು ತ್ತಿರುವ ಬಗ್ಗೆ ಕೇಳಿದಾಗ ಅಸೂಯೆಗೆ ಎಲ್ಲಾದರೂ ಮದ್ದು ಇದೆಯೇ? ಶಕ್ತಿ ಕಳೆದುಕೊಂಡಿದ್ದೇವೆ ಎಂದು ಕುಮಾರಸ್ವಾಮಿ, ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾನು ರಾಜೀನಾಮೆ ಕೊಡಬೇಕು ಎಂದು ಅವರು ಆಸೆ ಪಡುವುದನ್ನು ನಾನು ತಪ್ಪು ಎಂದು ಹೇಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಎಂಎಲ್‌ಸಿ ಚುನಾವಣೆ ಬಗ್ಗೆ ಕೇಳಿದಾಗ, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮುಗಿದ ಅನಂತರ ಜೂನ್ 17ಕ್ಕೆ ತೆರವಾಗಲಿರುವ 11 ಸ್ಥಾನಗಳ ಬಗ್ಗೆ ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.
ಕುಮಾರಸ್ವಾಮಿಗೆ ಏನೋ ಸಮಸ್ಯೆ ಇರಬೇಕು
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅನಂತರ ಕುಮಾರಸ್ವಾಮಿ ಅವರ ಟೆಲಿಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಅವರಲ್ಲಿ (ಕುಮಾರಸ್ವಾಮಿಗೆ) ಏನೋ ಸಮಸ್ಯೆ ಇರಬೇಕು. ಅವರು ಹಿಂದೆ ಇಂತಹ ಹೀನಾಯ ಕೆಲಸಗಳನ್ನು ಮಾಡಿರಬೇಕು. ಅದಕ್ಕಾಗಿ ಅದನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದರು.