Advertisement

ಎಚ್‍ಡಿಕೆ ಜೆಡಿಎಸ್‌ಗೆ ಮಾತ್ರ ಮುಖ್ಯಮಂತ್ರಿಯಲ್ಲ: ಸಿ.ಟಿ.ರವಿ

11:05 PM Jun 26, 2019 | Lakshmi GovindaRaj |

ಬೆಂಗಳೂರು: “ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ವೈಟಿಪಿಎಸ್‌ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿದಾಗ, “ಮೋದಿಗೆ ಓಟ್‌ ಹಾಕ್ತಿರಾ? ನನ್ನ ಬಳಿ ಸಮಸ್ಯೆ ಹೇಳ್ತೀರಾ’ ಎಂದು ಕೇಳಿರುವುದು ಅವರ ಹತಾಶೆ ಮನಸ್ಥಿತಿಯ ಪ್ರತೀಕ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಭಟನಾಕಾರರು ಕುಮಾರಸ್ವಾಮಿಯವರ ಪಿತ್ರಾರ್ಜಿತ ಆಸ್ತಿ ಅಥವಾ ಜೆಡಿಎಸ್‌ ಆಸ್ತಿ ಕೇಳಲಿಲ್ಲ. ರಾಜ್ಯದ ಮುಖ್ಯಮಂತ್ರಿ ಯಾವ ಪಕ್ಷಕ್ಕೂ ಸೇರಲ್ಲ. ಆದರೆ, ಇವರು ಮಾತನಾಡಿರುವ ರೀತಿ ನೋಡಿದರೆ ಮುಖ್ಯಮಂತ್ರಿಯಾಗುವ ಅರ್ಹತೆ, ಯೋಗ್ಯತೆ ಇಲ್ಲ ಎಂದೆನಿಸುತ್ತದೆ ಎಂದು ಕಿಡಿ ಕಾರಿದರು.

ಶಾಸಕ ಶಿವನಗೌಡ ನಾಯಕ್‌ ಅವರು, ತಮ್ಮ ಕ್ಷೇತ್ರದ ಅಭಿವೃದ್ಧಿ ಕುರಿತು ಪಾದಯಾತ್ರೆ ಮಾಡಿದರೆ ಬಿಜೆಪಿ ಸರ್ಕಾರ ಇದ್ದಾಗ ಕೆಲಸ ಮಾಡಿಸಿಕೊಳ್ಳದೆ ಜೆಡಿಎಸ್‌ ಸರ್ಕಾರ ಇದ್ದಾಗ ಬಂದು ಕೇಳ್ತೀಯಾ ಎಂದು ಏಕವಚನದಲ್ಲಿ ಪ್ರಶ್ನಿಸಿದ್ದಾರೆ. ಹಾಗಾದರೆ, ಇವರು ಜೆಡಿಎಸ್‌ಗೆ ಮಾತ್ರ ಮುಖ್ಯಮಂತ್ರಿಯಾ?

ಜೆಡಿಎಸ್‌ಗೆ ಮಾತ್ರ ಮುಖ್ಯಮಂತ್ರಿಯಾಗುವುದಾದರೆ ಮೂರು ಜಿಲ್ಲೆಗೆ ಸೀಮಿತವಾಗುತ್ತಾರೆ. ಕುಮಾರಸ್ವಾಮಿಯವರು ಜೆಡಿಎಸ್‌ಗೆ ಮಾತ್ರ ಮುಖ್ಯಮಂತ್ರಿಯಾಗಿದ್ದರೆ ಸಂವಿಧಾನದತ್ತವಾಗಿ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ನೀಡಿರುವ ಎಲ್ಲ ಸವಲತ್ತುಗಳನ್ನು ವಾಪಸ್‌ ಪಡೆಯಬೇಕು ಎಂದು ನಾನು ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next