Advertisement

Politics: ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಎಚ್ಡಿಕೆ ಇಂಗಿತ

12:56 AM Jan 11, 2024 | Team Udayavani |

ಮಂಡ್ಯ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೆಲುವಿಗೆ ರಣತಂತ್ರದ ಜತೆಗೆ ಸಾಧಕ-ಬಾಧಕಗಳ ಚರ್ಚೆಗೆ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್‌ ವೇದಿಕೆಯಾಗಿದೆ.

Advertisement

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉತ್ಸುಕರಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿದ್ದರೂ ರಾಜಕೀಯ ರಣತಂತ್ರಗಳಿಗೆ ಬಲಿಯಾಗಿದ್ದರ ವಿಮರ್ಶೆಯ ಜೊತೆಗೆ ಅದು ಮತ್ತೆ ಮರುಕಳುಹಿಸದಂತೆ ಎಚ್ಚರ ವಹಿಸಲು ಎಲ್ಲ ರೀತಿಯ ಚರ್ಚೆ ನಡೆಸಲು ಹೈ ವೋಲ್ಟೆàಜ್‌ ಮೀಟಿಂಗ್‌ ನಡೆದಿದೆ.

ಅಭ್ಯರ್ಥಿ ಆಯ್ಕೆ ಬಗ್ಗೆ 8 ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಚ್‌.ಡಿ. ಕುಮಾರಸ್ವಾಮಿ ಸ್ಪ ರ್ಧಿಸಿದರೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯುವ ಬಗ್ಗೆ ಒಮ್ಮತ ವ್ಯಕ್ತವಾಗಿದೆ. ಮೈತ್ರಿ ಅಭ್ಯರ್ಥಿಯಾದರೂ ಕಾಂಗ್ರೆಸ್‌ ಅನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಸಂಸದೆ ಸುಮಲತಾ ಕಾಂಗ್ರೆಸ್‌ನಿಂದ ಅಥವಾ ಪಕ್ಷೇತರವಾಗಿ ಸ್ಪರ್ಧೆಗಿಳಿದರೆ, ಮತ್ತೂಂದೆಡೆ ಕಾಂಗ್ರೆಸ್‌ನಿಂದ ಸಚಿವ ಎನ್‌. ಚಲುವರಾಯಸ್ವಾಮಿ ಅಥವಾ ಬೇರೆ ಯಾರಾದರೂ ಕಣಕ್ಕಿಳಿದರೆ ಕಳೆದ ಬಾರಿ ಚುನಾವಣೆಯಲ್ಲಾದ ಎಡವಟ್ಟು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಯಾವ ರೀತಿ ಚುನಾವಣೆ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಒಗ್ಗಟ್ಟಿನಿಂದ ದುಡಿದರೆ ಮಾತ್ರ ಬರುತ್ತೇನೆ: ಕುಮಾರಸ್ವಾಮಿ
ಎಲ್ಲರೂ ಒಗ್ಗಟ್ಟಿನಿಂದ ದುಡಿದರೆ ಮಾತ್ರ ಬರುತ್ತೇನೆ. ಇಲ್ಲದಿದ್ದರೆ ನೀವೇ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಅವರನ್ನೇ ಕಣಕ್ಕಿಳಿಸೋಣ ಎಂಬ ಅಭಿಪ್ರಾಯವನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ದಳಪತಿಗಳ ಮುಂದಿಟ್ಟಿದ್ದು, ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಬಿಜೆಪಿ, ಜೆಡಿಎಸ್‌ಗೆ ಮೂರ್‍ನಾಲ್ಕು ಕ್ಷೇತ್ರ ಬಿಟ್ಟು ಕೊಡಲಿದ್ದು, ಮಂಡ್ಯ, ಹಾಸನ, ತುಮಕೂರು ಹಾಗೂ ಕೋಲಾರ ಅಂತಿಮವಾಗಿದ್ದು, ಈ ಪೈಕಿ ಮಂಡ್ಯ ಕುಮಾರಸ್ವಾಮಿಗೆ ಉತ್ತಮ ವಾತಾವರಣ ಇರುವ ಕ್ಷೇತ್ರವಾಗಿದ್ದು, ಕ್ಷೇತ್ರ ವ್ಯಾಪ್ತಿಯ ಮಾಜಿ ಸಚಿವರಾದ ಸಿ.ಎಸ್‌. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಶಾಸಕ ಎಚ್‌.ಟಿ. ಮಂಜು, ಮಾಜಿ ಶಾಸಕರಾದ ಸಾ.ರಾ. ಮಹೇಶ್‌, ಡಾ| ಅನ್ನದಾನಿ, ಕೆ. ಸುರೇಶ್‌ಗೌಡ, ಮುಖಂಡ ಬಿ.ಆರ್‌. ರಾಮಚಂದ್ರ, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ವಿಧಾನ ಪರಿಷತ್‌ ಮಾಜಿ ಸದಸ್ಯರು ಕುಮಾರಸ್ವಾಮಿ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದು, ಚುನಾವಣೆ ಮಾಡಲು ಸಿದ್ಧರಿರುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಸುಮಲತಾ, ಸಿಆರ್‌ಎಸ್‌ ಸ್ಪರ್ಧೆ?

Advertisement

ಈಗಾಗಲೇ ಹಾಲಿ ಸಂಸದೆ ಸುಮಲತಾ ಅಂಬರೀಷ್‌ ಮಂಡ್ಯ ಕ್ಷೇತ್ರದಿಂದಲೇ ಸ್ಪ ರ್ಧಿಸುವ ಬಗ್ಗೆ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಮಂಗಳವಾರವೂ ಸಹ ತಮ್ಮ ಆಪ್ತರ ಮೂಲಕ ಪಕ್ಷೇತರ ಅಥವಾ ಪಕ್ಷದಿಂದ ಸ್ಪ ರ್ಧಿಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆದರೆ, ಎಚ್‌.ಡಿ. ಕುಮಾರಸ್ವಾಮಿ, ಸುಮಲತಾ ಅವರ ಬಗ್ಗೆ ಮೃದು ಧೋರಣೆ ತಾಳಿದ್ದಾರೆ. ಸೋಮವಾರ ಬಹಿರಂಗವಾಗಿಯೇ ಸುಮಲತಾ ನನ್ನ ಶತ್ರುವಲ್ಲ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದು ಮುಂದಿನ ರಾಜಕೀಯ ಬದಲಾವಣೆಗೂ ನಾಂದಿಯಾಗಬಹುದು. ಹಿಂದಿನ ಚುನಾವಣೆ ಸೇರಿದಂತೆ ರಾಜಕೀಯವಾಗಿ ಬದ್ಧವೈರಿಗಳಾಗಿರುವ ಸುಮಲತಾ ಅವರನ್ನೇ ಭೇಟಿ ಮಾಡುವ ಮಾತುಗಳನ್ನಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮತ್ತೂಂದೆಡೆ ಸಚಿವ ಎನ್‌. ಚಲುವರಾಯಸ್ವಾಮಿ ಕೂಡ ಕಾಂಗ್ರೆಸ್‌ನಿಂದ ಸ್ಪ ರ್ಧಿಸುತ್ತಾರೆ ಎನ್ನಲಾಗುತ್ತಿದೆ. ಆದರೆ, ಯಾವುದರ ಗುಟ್ಟು ಬಿಟ್ಟುಕೊಟ್ಟಿಲ್ಲ.

 ಎಚ್‌. ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next