Advertisement

ಜಾತಿಗಣತಿ ವರದಿ ಸ್ವೀಕಾರಕ್ಕೆ ಎಚ್‌ಡಿಕೆ ಹಿಂದೇಟು

09:54 AM Oct 25, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಕೈಗೊಂಡ ಸಮೀಕ್ಷೆ ವರದಿ ಸ್ವೀಕಾರಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಬಿಡಲಿಲ್ಲ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಮಕ್ತಂಪುರದ ಉಪ್ಪಾರಗಲ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ರವಿವಾರ ನಡೆದ ಉಪ್ಪಾರ ಸಮಾಜದ ವಿಭಾಗದ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಜಾತಿಗಣತಿ ಸಮೀಕ್ಷೆಗೆ ಆದೇಶಿಸಲಾಗಿತ್ತು. ಆದರೆ, ಅವರ ಅವಧಿಯಲ್ಲಿ ವರದಿ ಸಲ್ಲಿಕೆ ಆಗಲಿಲ್ಲ. ನಂತರ ಮೈತ್ರಿ ಸರ್ಕಾರದಲ್ಲಿ ನಾನು ಹಿಂದುಳಿದ ವರ್ಗದ ಸಚಿವನಾಗಿದ್ದಾಗ ವರದಿ ಸ್ವೀಕಾರಕ್ಕೆ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಆಗ ಕುಮಾರಸ್ವಾಮಿ ಅವರು ನನಗೆ ಕರೆ ಮಾಡಿ ನನಗೆ ವರದಿ ತೆಗೆದುಕೊಳ್ಳುವಂತೆ ಯಾರು ಹೇಳಿದ್ದು, ವರದಿ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪ್ಪಾರ ಸಮಾಜ ಸಂಘಟಿತವಾಗಬೇಕು

ರಾಜ್ಯದಲ್ಲಿ ಹಿಂದುಳಿದ ಉಪ್ಪಾರ ಸಮುದಾಯದ ಎಲ್ಲರೂ ಒಂದೇ ಸಂಘದಡಿ ಸಂಘಟಿತರಾಗಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಬೇಕು. ಇದಕ್ಕೆ ಸಮುದಾಯದ ಜನರ ಸಹಕಾರವೂ ಅಗತ್ಯವಾಗಿದೆ ಎಂದು ಉಪ್ಪಾರ ಸಮಾಜ ಸಂಘದ ರಾಜ್ಯಾಧ್ಯಕ್ಷರೂ ಆದ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

Advertisement

ಇದನ್ನೂ ಓದಿ: ಬಸವಲಿಂಗೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ

ರಾಜ್ಯ ಸಂಘಕ್ಕೆ 50 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಾವೇಶ ಸಂಘಟಿಸಲು ಉದ್ದೇಶಿಸಲಾಗಿದೆ. ಇದರ ಪೂರ್ವ ಸಿದ್ಧತೆ ಭಾಗವಾಗಿ ರಾಜ್ಯಾದ್ಯಂತ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಲಾಗುತ್ತದೆ ಎಂದರು.

2013ರಲ್ಲಿ ಸಮುದಾಯದ ಬೃಹತ್‌ ಸಮ್ಮೇಳನ ನಡೆಸಲಾಗಿತ್ತು. ಸಂಘದ ಹಕ್ಕೊತ್ತಾಯದ ಪರಿಣಾಮ ಭಗೀರಥ ಜಯಂತಿ ಆಚರಣೆಗೆ ಚಾಲನೆ, ಅಭಿವೃದ್ಧಿ ನಿಗಮ ಸ್ಥಾಪನೆ ಆಗಿದೆ. ಸಮುದಾಯ ಒಗ್ಗಟ್ಟಾಗಿ ಇದ್ದರೆ ಸಂಘಕ್ಕೆ ಮತ್ತಷ್ಟು ಬಲ ಬರುತ್ತದೆ. ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗಿದೆ ಎಂದರು.

ಕಲಬುರಗಿ ಮತ್ತು ರಾಯಚೂರು ಭಾಗದಲ್ಲಿ ಉಪ್ಪಾರ ಸಮುದಾಯದ ಜನರು ಹೆಚ್ಚಾಗಿದ್ದಾರೆ. ಆದರೆ, ಅವರು ಶಿಕ್ಷಣದಲ್ಲಿ ಹಿಂದೆ ಉಳಿದಿದ್ದಾರೆ. ಹೀಗಾಗಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಸರಸ್ವತಿ ಚಿಮ್ಮಲಗಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಒಂದು ಎಕರೆ ಭೂಮಿಯನ್ನು ಸಮುದಾಯದ ಹೆಣ್ಣು ಮಕ್ಕಳಿಗಾಗಿ ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ನೀಡಲಾಗುವುದು ಎಂದು ತಿಳಿಸಿದರು.

ರಾಯಚೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಿ.ಸುರೇಖಾ ಮಾತನಾಡಿ, ರಾಯಚೂರು ಸಮೀಪದ ಯರಮರಸ್‌ ನಲ್ಲಿ ತಮಗೆ ಸೇರಿದ ಸ್ವಂತ ಜಾಗವನ್ನು ಸಮುದಾಯದ ಮಕ್ಕಳಿಗೆ ಹಾಸ್ಟೆಲ್‌ ನಿರ್ಮಾಣಕ್ಕೆ ನೀಡಲಾಗುತ್ತದೆ ಎಂದು ಘೋಷಿಸಿದರು.

ಉಪ್ಪಾರ ಸಮಾಜದ ಡಾ| ಪುರುಪೋತ್ತಮಾನಂದ ಪುರಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ ವಕೀಲ, ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ರಾಯಚೂರು ಜಿಲ್ಲಾಧ್ಯಕ್ಷ ವೆಂಕೋಬ ಉಪ್ಪಾರ ಹಾಗೂ ವಿಜಯಪುರ, ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸಮುದಾಯದ ಮುಖಂಡರು ಮತ್ತು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next