ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದು ಪ್ರವಾಹ ಸಂತ್ರಸ್ತರ ಜತೆಯಲ್ಲೇ ದೀಪಾವಳಿ ಆಚರಿಸಲಿದ್ದಾರೆ.
ಶನಿವಾರ ಎಚ್.ಡಿ.ಕುಮಾರಸ್ವಾಮಿ ಅವರು ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸರಕಾರದ ವತಿಯಿಂದ ನೀಡಿರುವ ಪರಿಹಾರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅನಂತರ ಸಂತ್ರಸ್ತರ ಜತೆ ಚರ್ಚಿಸಿದರು.
ರಾತ್ರಿ ಚಿಕ್ಕೋಡಿಯಲ್ಲೇ ವಾಸ್ತವ್ಯ ಹೂಡಿರುವ ಅವರು ರವಿವಾರ ಕಾಗವಾಡ, ಅಥಣಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹುಬ್ಬಳ್ಳಿಯಲ್ಲಿ ತಂಗಲಿರುವರು. ಸೋಮವಾರ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು ಕ್ಷೇತ್ರಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಂದ ಹುಬ್ಬಳ್ಳಿಗೆ ವಾಪಸಾಗಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡನೇ ಬಾರಿ ಪ್ರವಾಹ ತಲೆದೋರಿದ್ದು ಸಾಕಷ್ಟು ನಷ್ಟವುಂಟಾಗಿದೆ. ಉತ್ತರ ಕರ್ನಾಟಕ ಭಾಗದ ಜನರು ಸಂಕಷ್ಟದಲ್ಲಿದ್ದಾರೆ. ಅವರ ಜತೆಯೇ ಇದ್ದು ಅವರ ಸಮಸ್ಯೆಗಳನ್ನು ಕೇಳಿ ಅವರೊಂದಿಗೆ ಹಬ್ಬ ಆಚರಿಸಲಿದ್ದೇನೆ ಎಂದು ಹೇಳಿದರು.
ರಾಜ್ಯ ಸರಕಾರವು ತ್ವರಿತವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯದ ಬಗ್ಗೆ ಗಮನಹರಿಸಬೇಕು. ನಾನು ಈ ವಿಚಾರದಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ಕೇಂದ್ರ-ರಾಜ್ಯ ಸರಕಾರ ಎಂಬುದಕ್ಕಿಂತ ಜನರಿಗೆ ಪರಿಹಾರ ಸಿಗುವುದು ಮುಖ್ಯ ಎಂದರು.