ಹುಬ್ಬಳ್ಳಿ: ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಯಾವುದೇ ಬೆಲೆ ಕೊಡದ ರೀತಿ ವರ್ತಿಸುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಬರೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ಯಾಚನೆ ಮಾಡುತ್ತೇನೆಂದು ಕುಮಾರಸ್ವಾಮಿಯವರೇ ತೀರ್ಮಾನಿಸಿದ್ದರು. ಆದರೆ, ಅದರ ಸಾಬೀತಿಗೆ ಐದು ದಿನ ತೆಗೆದುಕೊಂಡಿದ್ದು ದೊಡ್ಡ ದುರಂತ. ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ನೆಗೆಟಿವ್ ಇತಿಹಾಸ ಸೃಷ್ಟಿ ಮಾಡುವಲ್ಲಿ ಕುಮಾರಸ್ವಾಮಿ ಆ್ಯಂಡ್ ಕಂಪನಿ ಎಕ್ಸ್‌ಪರ್ಟ್ ಆಗಿದ್ದಾರೆಂದು ಲೇವಡಿ ಮಾಡಿದರು.
ಮೈತ್ರಿ ನಾಯಕರು ಕುದುರೆ ವ್ಯಾಪಾರ ಮಾಡುವ ಮುನ್ಸೂಚನೆ ಕೊಡುತ್ತಿದ್ದಾರೆ. ಯಾವ ಶಾಸಕರೂ ಖರೀದಿಯಾಗಿಲ್ಲ. ಮೈತ್ರಿ ನಾಯಕರು ದುಡ್ಡು, ಕಾಸು ಕೊಟ್ಟು ಅತೃಪ್ತ ಶಾಸಕರನ್ನು ವಾಪಸ್ ಕರೆ ತರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ವಿಶ್ವಾಸಮತ ಸಾಬೀತಿಗೆ ವಿಳಂಬ ಮಾಡುತ್ತಿದ್ದಾರೆ ಎಂದರು.
ಸ್ಪೀಕರ್ ರಮೇಶ ಕುಮಾರ ವರ್ತನೆ ಆಘಾತಕಾರಿ. ಅವರು ತತ್ವಬದ್ಧರಾಗಿ ನಡೆದುಕೊಳ್ಳುತ್ತಾರೆಂದು ಭಾವಿಸಿದ್ದೆ. ಆದರೆ ಕೆಟ್ಟ ರೀತಿಯಿಂದ ವರ್ತಿಸಿದ್ದು ದುರ್ದೈವ. ರಾಜ್ಯಪಾಲರು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಿದ್ದಾರೆ. ಬಹುಮತ ಸಾಬೀತಿಗೆ ಎಲ್ಲ ದೃಷ್ಟಿಯಿಂದ ಅವಕಾಶ ಕೊಟ್ಟಿದ್ದಾರೆ.
ಮೈತ್ರಿ ನಾಯಕರು ತಮಗೆ ಬಹುಮತ ಇಲ್ಲದೆ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದಾರೆ. ವಿಶ್ವಾಸಮತಕ್ಕೆ ರಾಜ್ಯಪಾಲರು ನೀಡಿದ ಡೆಡ್‌ಲೈನ್ ಕೂಡ ಉಲ್ಲಂಘಿಸುವ ಮೂಲಕ ದರ್ಬಾರ್ ನಡೆಸಿದ್ದಾರೆ. ಇವರು ಯಾವುದೇ ಸರ್ಕಸ್ ಮಾಡಿದರೂ ರಾಜೀನಾಮೆ ಪರ್ವ ಮೈತ್ರಿಗೆ ಮುಳ್ಳಾಗಲಿದೆ ಎಂದರು.
ಕೇಂದ್ರ ಸರಕಾರ ಈಗ ಯಾವುದೇ ರೀತಿ ಮಧ್ಯಪ್ರವೇಶ ಮಾಡಲ್ಲ. ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸ್ಪೀಕರ್ ವಿಶ್ವಾಸಮತ ಸಾಬೀತಿಗೆ ಸೋಮವಾರ ಕೊನೆಯ ದಿನ ಎಂದಿದ್ದಾರೆ. ಅಲ್ಲಿಯವರೆಗೆ ಸಮಾಧಾನದಿಂದ ಕಾಯುವುದು ಸೂಕ್ತ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಶ್ರೀಮಂತ ಪಾಟೀಲ ಸೇರಿ ಅವರ ಶಾಸಕರೇ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಶಾಸಕರು, ಸಂಸದರನ್ನು ಅಪಹರಿಸುವುದು ಈಗ ಸಾಧ್ಯವಿಲ್ಲ ಎಂದರು.