ಬೆಂಗಳೂರು: “ಪದವಿ ಆಸೆಗಾಗಿ ಕಾಂಗ್ರೆಸ್‌ನವರಿಗೆ ದ್ರೋಹ ಬಗೆದು ಧರ್ಮಸಿಂಗ್ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರಿ. ಧರ್ಮಸಿಂಗ್ ಸಾವಿಗೂ ನೀವೇ ಕಾರಣವಾದಿರಿ. ಅನಂತರ ನಮಗೂ ವಿಶ್ವಾಸದ್ರೋಹ ಮಾಡಿದಿರಿ. ನಂಬಿಕೆ ದ್ರೋಹ ಎಂಬುದು ನಿಮ್ಮ ರಕ್ತದಲ್ಲೇ ಕರಗತವಾಗಿದೆ’ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಕುರಿತು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಆಡಿದ ಈ ಮಾತುಗಳು ಸದನದಲ್ಲಿ ಸೋಮವಾರ ಕೋಲಾಹಲ ಸೃಷ್ಟಿಸಿತು.
“ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅನಂತರವೂ ಧರ್ಮಸಿಂಗ್ ಬದುಕಿದ್ದರು. ಸಂಸತ್ ಸದಸ್ಯರೂ ಆಗಿದ್ದರು. 11 ವರ್ಷಗಳ ಅನಂತರ ಅವರು ನಮ್ಮನ್ನು ಅಗಲಿದರು. ಧರ್ಮಸಿಂಗ್ ಅವರಿಗೆ ದ್ರೋಹ ಮಾಡಿದ್ದೇನೆ ಎನ್ನುವ ನೀವೂ ಅದರಲ್ಲಿ ಪಾಲುದಾರರಲ್ಲವೇ?’ಎಂದು ಕುಮಾರಸ್ವಾಮಿ ಸಹ ತಿರುಗೇಟು ನೀಡಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಪರಸ್ಪರ ವೈಯಕ್ತಿಕ ನಿಂದನೆಯಲ್ಲಿ ತೊಡಗಿ ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಬಿಸಿಯೇರಿದ ವಾತಾವರಣ ನಿರ್ಮಾಣವಾಗಿತ್ತು.
ಯಡಿಯೂರಪ್ಪ ಮಾಡಿದ ಆರೋಪ ಸದನದಲ್ಲಿ ಕೋಲಾಹಲಕ್ಕೂ ಕಾರಣವಾಯಿತು. ಜೆಡಿಎಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ವೈಯಕ್ತಿಕ ಟೀಕೆಯ ಮಟ್ಟ ಚೌಕಟ್ಟು ಮೀರುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ, “ಇಬ್ಬರೂ ನಿಮ್ಮದೇ ಆದ ವ್ಯಕ್ತಿತ್ವ, ಘನತೆ, ಜನಬೆಂಬಲ, ವರ್ಚಸ್ಸು ಹೊಂದಿದ್ದೀರಿ. ನೀವೇ ಉದ್ವೇಗಕ್ಕೆ ಒಳಗಾಗಿ ಸದನದಲ್ಲಿ ಈ ರೀತಿ ಮಾತನಾಡುವುದು ಒಳ್ಳೆಯದಲ್ಲ. ಘಟಿಸಿ ಹೋದ ಪ್ರಸಂಗ ಮತ್ತೆ ಕೆದಕುವುದರಲ್ಲಿ ಆರ್ಥವಿಲ್ಲ’ ಎಂದು ಕಿವಿಮಾತು ಹೇಳಿದ ಅನಂತರ ಇಬ್ಬರೂ ನಾಯಕರು ಶಾಂತರಾದರು. ಧರ್ಮಸಿಂಗ್ ಸಾವಿಗೆ ಕಾರಣರಾದಿರಿ ಎಂಬ ಪದ ಕಡತದಿಂದ ತೆಗೆದುಹಾಕಲು ಸೂಚಿಸುತ್ತಿದ್ದೇನೆಂದು ಸ್ಪೀಕರ್ ಹೇಳಿದರು. ಕಡತದಿಂದ ಆ ಪದ ತೆಗೆದುಹಾಕಲಾಯಿತು. ಸದನದಲ್ಲೇ ಇದ್ದ ಧರ್ಮಸಿಂಗ್ ಪುತ್ರ ಅಜಯ್‌ಸಿಂಗ್, ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇಲ್ಲದವರ ಬಗ್ಗೆ ಅನಾವಶ್ಯಕವಾಗಿ ಮಾತನಾಡಿ ಗೊಂದಲ ಮೂಡಿಸಲಾಗುತ್ತಿದೆ ಎಂದು ದೂರಿದರು.
ಕರ್ಣನಿಗೆ ಹೋಲಿಸಿಕೊಂಡ ಎಚ್‌ಡಿಕೆ
ಮಹಾಭಾರತದ ಕರ್ಣನಿಗೆ ತಮ್ಮನ್ನು ಹೋಲಿಸಿಕೊಂಡ ಕುಮಾರಸ್ವಾಮಿ, ಕರ್ಣನ ರೀತಿಯಲ್ಲಿ ನಾನು ಸಾಂದರ್ಭಿಕ ಶಿಶು. ಆದರೆ, ಈ ಶಿಶುವಿಗೆ ಅಪ್ಪ-ಅಮ್ಮ ಇಲ್ಲ, ವಕ್ರ, ಕಾಲಿಲ್ಲ, ಕೈಯಿಲ್ಲ ಎಂಬ ಕುಹಕ ಬೇಡ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರೇ ಈ ಸಾಂದರ್ಭಿಕ ಶಿಶುವಿಗೆ ಅಪ್ಪ-ಅಮ್ಮ. ದೇವರ ದಯೆ ಹಾಗೂ ಕಾಂಗ್ರೆಸ್ ನಾಯಕರು-ಶಾಸಕರ ಸಹಕಾರದಿಂದಲೇ ನಾನು ಸಿಎಂ ಆಗಿದ್ದೇನೆ ಎಂದು ಹೇಳಿದರು.