Advertisement

ಮದುವೆ ಕಾರ್ಯಕ್ರಮದಲ್ಲಿ ಎಚ್‌ಡಿಕೆ-ಬಿಎಸ್‌ವೈ ಮುಖಾಮುಖೀ

08:31 AM Nov 02, 2019 | Team Udayavani |

ಬೆಂಗಳೂರು: ನಗರದ ಖಾಸಗಿ ಹೊಟೇಲ್‌ನಲ್ಲಿ ಉದ್ಯಮಿಯೊಬ್ಬರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೈ ಕುಲುಕಿ ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿರುವುದು ಕುತೂಹಲ ಮೂಡಿಸಿದೆ.

Advertisement

ಇದೇ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಮ್ಮುಖದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಕೆಲವು ಕಾಲ ಮಾತನಾಡಿದರು ಎಂದು ಹೇಳಲಾಗುತ್ತಿದ್ದು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಪತನಗೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು. ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಎರಡು ಮೂರು ತಿಂಗಳುಗಳಲ್ಲಿ ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಹೀಗಾಗಿ ಈ ಭೇಟಿ ಸಂಚಲನ ಮೂಡಿಸಿದೆ.

ಉಪ ಚುನಾವಣೆ ಫ‌ಲಿತಾಂಶದ ಅನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಬಹುದು. ಬಿಜೆಪಿಗೆ ನಿರೀಕ್ಷಿತ ಫ‌ಲಿತಾಂಶ ಬಾರದಿದ್ದರೆ ಮತ್ತೆ ಜೆಡಿಎಸ್‌-ಬಿಜೆಪಿ ಸರಕಾರ ರಚನೆಯಾಗಬಹುದು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಹೊಟೇಲ್‌ನಲ್ಲಿ ನಡೆದಿರುವ ಮಾತುಕತೆಯಲ್ಲಿ ಇವೆಲ್ಲ ಅಂಶಗಳು ಪ್ರಸ್ತಾವವಾಗಿರಬಹುದು ಎಂದು ಹೇಳಲಾಗುತ್ತಿದೆ.

ಆದರೆ ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ವಿವಾಹ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಕೈ ಕುಲುಕಿ ಶುಭಾಶಯ ಕೋರುವುದು, ಕುಶಲೋಪರಿ ವಿಚಾರಿಸುವುದು ಸಹಜ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.

Advertisement

ಜೆಡಿಎಸ್‌ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು ಬಿಜೆಪಿಯತ್ತ ಹೋಗಲು ತಯಾರಿ ಮಾಡಿಕೊಂಡಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಕುಮಾರಸ್ವಾಮಿ ಈ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಐಟಿ ಭಯವಾ?
ಮತ್ತೂಂದು ಮೂಲಗಳ ಪ್ರಕಾರ ಕಾಂಗ್ರೆಸ್‌ ನಾಯಕರ ಮೇಲೆ ದಾಳಿ ಆದಂತೆ ತಮ್ಮ ಮೇಲೂ ಐಟಿ ಅಥವಾ ಸಿಬಿಐ ದಾಳಿಗೆ ಬಿಜೆಪಿ ಮುಂದಾಗಬಹುದು ಎಂಬ ಆತಂಕದಿಂದ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್‌ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಈ ಕುರಿತು ಕೇಳಲಾದ ಪ್ರಶ್ನೆಗೆ ಕುಮಾರಸ್ವಾಮಿ ಅವರು ನನಗೆ ಐಟಿ, ಸಿಬಿಐ ಭಯವಿಲ್ಲ. ನನ್ನ ಮನೆ ಮೇಲೆ ಆದಾಯ ತೆರಿಗೆಯವರು ಯಾವಾಗ ಬೇಕಾದರೂ ದಾಳಿ ಮಾಡಬಹುದು. ಅವರಿಗೆ ಯಡಿಯೂರಪ್ಪ ಅವರ ದಾಖಲೆಗಳು ಸಾಕಷ್ಟು ಸಿಗುತ್ತವೆ ಎಂದು “ಬಾಂಬ್‌’ ಸಿಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next