ಸುರತ್ಕಲ್: ಕಾಂಗ್ರೆಸ್ ಪಕ್ಷ 70 ವರ್ಷದಿಂದ ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿತೇ ಹೊರತು ಯಾವುದೇ ಸೌಲಭ್ಯ ಕೊಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದರು.
ಕೃಷ್ಣಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಮೊದಿನ್ ಬಾವಾ ಪರವಾಗಿ ಆಯೋಜಿಸಲಾದ ಬೃಹತ್ ಸಮಾ ವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಮತಹಾಕಿದರೆ ಬಿಜೆಪಿಗೆ ಮತಹಾಕಿದಂತೆ ಎಂದು ಹೇಳುವ ಕಾಂಗ್ರೆಸ್ ಪಕ್ಷವು ಇದೀಗ ಬಿಜೆಪಿ ಬಿಟ್ಟು ಬಂದ ಕಟ್ಟರ್ ಹಿಂದುತ್ವವಾದಿ ನಾಯಕರನ್ನು ಸೇರಿಸಿಕೊಂಡಿದೆ ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಇಂದು ನೆಮ್ಮದಿಯ ಬದುಕು ಕಾಣಬೇಕಿದೆ. ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡುವುದು ಇದೇ ಜಿಲ್ಲೆ. ಹಾಗಾಗಿ ಇಲ್ಲಿನ ಆರ್ಥಿಕ ಶಕ್ತಿಯನ್ನು ಸರಿಯಾಗಿ ಬಳಸಿದರೆ ಮಾದರಿ ಜಿಲ್ಲೆಯನ್ನಾಗಿ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಅಮಾಯಕ ಯುವಕರನ್ನು ಬಳಸಿಕೊಂಡು, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಿ ಜೀವ ಕಳೆದುಕೊಳ್ಳುವಂಥ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ಹಲಾಲ್ ಕಟ್, ಹಿಜಾಬ್ ಸಮಸ್ಯೆಗಳನ್ನು ದೊಡ್ಡದು ಮಾಡಿ ಕಂದರ ಸೃಷ್ಟಿಸಲಾಯಿತು. ದ್ವೇಷದ ವಾತಾವರಣ ಉಂಟುಮಾಡಲಾಯಿತು. ಬಿಲ್ಲವ ನಿಗಮ ಮಾಡಿ ಚುನಾವಣೆಗಾಗಿ ಸೆಳೆಯುವ ಪ್ರಯತ್ನ ನಡೆಸಲಾಯಿತು ಎಂದು ಕುಮಾರಸ್ವಾಮಿ ಆಪಾದಿಸಿದರು.
ದ.ಕ. ವಿಜಯ ಬ್ಯಾಂಕ್, ಸಿಂಡಿಕೇಟ್, ಕಾರ್ಪೊ ರೇಷನ್ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಇಲ್ಲಿನ ಐತಿಹಾಸಿಕ ಕುರುಹು ನಾಶಮಾಡಿದ್ದೇ ಬಿಜೆಪಿಯ ಕೊಡುಗೆ ಎಂದರಲ್ಲದೇ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಆಧರಿತ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ ಇತ್ಯಾದಿ ಅಭಿವೃದ್ಧಿಗೆ ಅವಕಾಶವಿದ್ದು, ಅಶಾಂತಿಯ ಕಾರಣದಿಂದ ಸಾಧ್ಯವಾಗುತ್ತಿಲ್ಲ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಸರ್ವ ಜನಾಂಗದ ಶಾಂತಿಯ ತೋಟವನ್ನು ಸ್ಥಾಪಿಸಲು ಜೆಡಿಎಸ್ ಬದ್ಧ. ಮೊದಿನ್ ಬಾವಾ ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಚಿತ್ರಣ ಬದಲಾಯಿಸಲು ನಾಂದಿ ಹಾಡಬೇಕೆಂದು ಅವರು ಕರೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಎಂ. ಫಾರೂಕ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಅಹಂಕಾರದಿಂದ ನಡೆದುಕೊಂಡಾಗಲೆಲ್ಲಾ ಮಂಗಳೂರು ಉತ್ತರದಲ್ಲಿ ಜೆಡಿಎಸ್ ಪಕ್ಷವನ್ನು ಮತದಾರ ಆಯ್ಕೆ ಮಾಡಿದ್ದಾನೆ. ಈ ಬಾರಿ ಮತ್ತೆ ಕಾಂಗ್ರೆಸ್ ಅದೇ ರೀತಿ ನಡೆದುಕೊಂಡಿದ್ದು, ಬಾವಾ ಅವರಿಗೆ ಟಿಕೆಟ್ ನಿರಾಕರಿಸಿದ್ದು ಮತ್ತೆ ಜೆಡಿಎಸ್ ಜಯಗಳಿಸಲಿದೆ. ಕರಾವಳಿಯಲ್ಲಿ ಪಕ್ಷವು ಖಾತೆ ತೆರೆಯಬೇಕು ಎಂಬ ಕುಮಾರಸ್ವಾಮಿ ಅವರ ಕನಸು ನನಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸರ್ವಧರ್ಮಗಳ ಬೆಸುಗೆಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಭಜನ್ ಹಾಗೂ ಮುಸ್ಲಿಂ ಸಮುದಾಯದ ಪ್ರಾರ್ಥನೆ ನೆರವೇರಿಸಲಾಯಿತು.
ವೇದಿಕೆಯಲ್ಲಿ ಜೆಡಿಎಸ್ ನಾಯಕರಾದ ಮೊಹಮ್ಮದ್ ಕುಂನಿ, ಎಂ.ಬಿ ಸದಾಶಿವ, ಜೆಡಿಎಸ್ ಅಭ್ಯರ್ಥಿಗಳು ಉಪಸ್ಥಿತರಿದ್ದರು.