ವಿಜಯಪುರ: ಪೆಟ್ರೋಲ್-ಡೀಸೆಲ್ ದರ ಏರಿಕೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸೇಡಿನ ಕ್ರಮವಲ್ಲ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗಲೂ ತೈಲ ದರ ಏರಿಕೆ ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಚಡಚಣ ತಾಲೂಕಿನ ಇಂಚಗೇರಿಯಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕಾರಣಕ್ಕೆ ಇಂಧನ ದರ ಏರಿಕೆ ಮಾಡಿದ್ದಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ವಿವಿಧ ರಾಜ್ಯಗಳ ದರ ಹೀಗಿದೆ ಎಂದರು
ಕರ್ನಾಟಕದಲ್ಲಿ ಪೆಟ್ರೋಲ್ ದರ 102.86 ರೂ. ಇದ್ದು, ತಮಿಳುನಾಡು ರಾಜ್ಯಕ್ಕೆ ಸಮನಾಗಿದೆ. ಆದರೆ ನೆರೆಯ ಕೇರಳದ ಕಾಸರಗೋಡಿನಲ್ಲಿ 106.06 ರೂ. ಇದೆ. ಆಂಧ್ರದೇಶದಲ್ಲಿ 109 ರೂ. ಹಾಗೂ ತೆಲಂಗಾಣದ ಹೈದ್ರಾಬಾದ್‌ನಲ್ಲಿ ಇನ್ನೂ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ 104 ರೂ., ರಾಜಸ್ಥಾನದಲ್ಲಿ 104.86 ರೂ. ಹಾಗೂ ಮಧ್ಯಪ್ರದೇಶದಲ್ಲಿ 106.47 ರೂ. ಇದೆ. ರಾಷ್ಟ್ರೀಯ ದರಕ್ಕೆ ಹೊಂದಾಣಿಕೆ ಮಾಡಲು ತೈಲ ದರ ಏರಿಕೆ ಮಾಡಿದ್ದೇವೆ. 2021ರಲ್ಲಿ ಪೆಟ್ರೋಲ್ ದರದಲ್ಲಿ ಶೇ. 35 ರೂ. ತೆರಿಗೆ ಇತ್ತು ಡೀಸೆಲ್ ಶೇ. 24 ತೆರಿಗೆ ಇತ್ತು ಎಂದು ವಿವರಿಸಿದರು.
ಗ್ಯಾರಂಟಿ ನಿಲ್ಲೋದಿಲ್ಲ
ವಿಪಕ್ಷ ನಾಯಕ ಅಶೋಕ ಅವರ ಸೋಲಿಗೆ ಸೇಡು ಹೇಳಿಕೆ ಅರ್ಥವಿಲ್ಲದ್ದು, 2019ರ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 9 ಸ್ಥಾನ ಗೆದ್ದಿದೆ. ಬಿಜೆಪಿ 25ರಿಂದ 17ಕ್ಕೆ ಕುಸಿದಿದೆ ಎಂದು ತಿರುಗೇಟು ನೀಡಿದರು. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದ ಸಿದ್ಧರಾಮಯ್ಯ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಚುನಾವಣೆಗಾಗಿ ಅಲ್ಲ, ಜನರಿಗಾಗಿ ಎಂದು ವಿವರಿಸಿದರು.
ಅನುದಾನದಲ್ಲಿ ತಾರತಮ್ಯವಿಲ್ಲ
ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸ್ವಪಕ್ಷೀಯ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಹಾಗೂ ಬೀಳಗಿ ಶಾಸಕ ಜಿ.ಟಿ. ಪಾಟೀಲ ಆರೋಪದ ಕುರಿತು ಪ್ರತಿಕ್ರಯಿಸಿದ ಅವರು, ಯಾವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೋ ನೋಡುತ್ತೇನೆ. ಶಾಸಕರಿಗೆ ಎಲ್ಲ ಅನುದಾನ ಕೊಟ್ಟಿದ್ದೇವೆ ಎಂದರು.