Advertisement

ಎಚ್‌ಡಿಡಿ ಮೌನ: ಕೈ ಇಕ್ಕಟ್ಟಿಗೆ ಸಿಲುಕಿಸುವ ತಂತ್ರ?

06:00 AM Aug 02, 2018 | Team Udayavani |

ಬೆಂಗಳೂರು: ಉತ್ತರ ಕರ್ನಾಟಕದ ಜನ ಜೆಡಿಎಸ್‌ ಪರ ಮತ ಹಾಕದ ಕುರಿತಂತೆ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ, ನಂತರ ತೀವ್ರಗೊಂಡ ಪ್ರತ್ಯೇಕತೆಯ ಕೂಗಿಗೆ ಸಂಬಂಧಿಸಿದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮೌನ ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

ದೇವೇಗೌಡರ ಮೌನದ ಹಿಂದೆ ಕೆಲವು ದಿನಗಳ ಬಳಿಕ ಜನ ಎಲ್ಲವನ್ನೂ ಮರೆತು ಸುಮ್ಮನಾಗುತ್ತಾರೆ ಎಂಬ ಅಭಿಪ್ರಾಯದ ಜತೆ ಮಿತ್ರ ಪಕ್ಷ ಕಾಂಗ್ರೆಸ್‌ ತಾನಾಗಿಯೇ ನಿರ್ಧಾರ ಕೈಗೊಂಡು ಇಕ್ಕಟ್ಟಿಗೆ ಸಿಲುಕಲಿ ಎಂಬ ಉದ್ದೇಶವೂ ಇದೆ. 

ಮುಖ್ಯಮಂತ್ರಿಗಳ ಹೇಳಿಕೆ ಮತ್ತು ಪ್ರತ್ಯೇಕತೆ ಕೂಗಿನಿಂದ ಜೆಡಿಎಸ್‌ಗಿಂತ ಹೆಚ್ಚು ನಷ್ಟವಾಗುವುದು ಕಾಂಗ್ರೆಸ್‌ಗೆ. ಹೀಗಾಗಿ ಕಾಂಗ್ರೆಸ್‌ ಮುಂದೇನು ಕ್ರಮ ಕೈಗೊಳ್ಳುವುದೋ ಎಂಬುದನ್ನು ನೋಡಿಕೊಂಡು ಸರ್ಕಾರಕ್ಕೆ ಅಪಾಯ ಎದುರಾದರೆ ಅದು ಕಾಂಗ್ರೆಸ್‌ನಿಂದಲೇ ಎಂಬ ಅಭಿಪ್ರಾಯ ಮೂಡುವಂತೆ ಮಾಡುವುದು ಗೌಡರ ಮೌನದ ಹಿಂದಿರುವ ತಂತ್ರಗಾರಿಕೆ. ಹೀಗಾಗಿ ಮುಖ್ಯಮಂತ್ರಿ ಹೇಳಿಕೆ ಮತ್ತು ಪ್ರತ್ಯೇಕತೆ ಕೂಗಿನ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಉ.ಕ. ಭಾಗದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಚುರುಕುಗೊಂಡಿದ್ದು, ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅನುದಾನ ಮೀಸಲಿಟ್ಟಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಹೀಗಿದ್ದರೂ ಆ ಭಾಗದ ಜನ ಜೆಡಿಎಸ್‌ಗೆ ಬೆಂಬಲ ನೀಡುತ್ತಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯತ್ತ ತಮ್ಮ ಒಲವು ತೋರಿಸುತ್ತಿದ್ದಾರೆ. ಇದೀಗ ಪ್ರತ್ಯೇಕತೆಯ ಕೂಗಿನ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್‌ ಇಕ್ಕಟ್ಟಿಗೆ ಸಿಲುಕಿದೆ. ಇದರ ಲಾಭ ಪಡೆದುಕೊಳ್ಳುವುದು ಜೆಡಿಎಸ್‌ ವರಿಷ್ಠ‌ರ ಉದ್ದೇಶ ಎಂದು ತಿಳಿದುಬಂದಿದೆ.

ಬಿಜೆಪಿಯ ಕಾಂಗ್ರೆಸ್‌ ಮುಕ್ತ ಭಾರತ, ಕಾಂಗ್ರೆಸ್‌ ಮುಕ್ತ ಕರ್ನಾಟಕ ಘೋಷಣೆಯಿಂದ ಆತಂಕಗೊಂಡಿರುವ ಕಾಂಗ್ರೆಸ್‌, ದೇಶಾದ್ಯಂತ ಸೋಲಿನತ್ತ ಸಾಗುತ್ತಿದ್ದಾಗ ಕರ್ನಾಟಕದಲ್ಲಾದರೂ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ವಿಧಾನಸಭೆ ಚುನಾವಣೆ ಫ‌ಲಿತಾಂಶ ಅತಂತ್ರವಾದಾಗ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿತು. ಸಂಖ್ಯಾಬಲದಲ್ಲಿ ಜೆಡಿಎಸ್‌ಗಿಂತ ಹೆಚ್ಚು ಸ್ಥಾನ ಪಡೆದಿದ್ದರೂ ಅಧಿಕಾರದಲ್ಲಿರಬೇಕು ಎಂಬ ಏಕೈಕ ಕಾರಣಕ್ಕೆ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತು. ಇದರ ಲಾಭ  ಪಡೆದು ಅಧಿಕಾರದಲ್ಲಿ ಮುಂದುವರಿಯುವ ದೃಷ್ಟಿಯಿಂದ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದಲೇ ದೇವೇಗೌಡರು ಮೌನಕ್ಕೆ ಶರಣಾಗಿದ್ದಾರೆನ್ನಲಾಗಿದೆ.

Advertisement

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೇತರ ರಾಜಕೀಯ ಒಕ್ಕೂಟ ರಚಿಸುತ್ತಿರುವ ಕಾಂಗ್ರೆಸ್‌ ಅದಕ್ಕಾಗಿ ಪ್ರಾದೇಶಿಕ ಪಕ್ಷಗಳ ಮೊರೆ ಹೋಗಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದು, ಅದರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌ ಜತೆಗಿನ ಹೊಂದಾಣಿಕೆಯೂ ಒಂದು. ಕೇರಳದಲ್ಲಿ ಎಡರಂಗಗಳ ಒಕ್ಕೂಟದ ಜತೆ ಜೆಡಿಎಸ್‌ ಮೈತ್ರಿ ಇದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜತೆ ಕೈಜೋಡಿಸಿದೆ.

2019ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಪ್ರಾದೇಶಿಕ ಪಕ್ಷಗಳ ಜತೆಗಿನ ಮೈತ್ರಿ  ಅನಿವಾರ್ಯತೆ ಇದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿಯೇತರ ರಾಜಕೀಯ ಒಕ್ಕೂಟದಲ್ಲಿ ಬಿರುಕು ಮೂಡಲಿದೆ. ಹೀಗಾಗಿ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಳ್ಳಲು ಜೆಡಿಎಸ್‌ ಮುಂದಾಗಿದೆ.

ಮೌನದ ಹಿಂದಿರುವ ಮರ್ಮ
ಒಂದೊಮ್ಮೆ ರಾಜ್ಯದಲ್ಲಿ ಮೈತ್ರಿ ಮುರಿದರೆ ಅದಕ್ಕೆ ಕಾಂಗ್ರೆಸ್ಸೇ ಕಾರಣ ಎಂಬ ಅಭಿಪ್ರಾಯ ಮೂಡಬೇಕು. ಮೈತ್ರಿ ಮುರಿದು ಸರ್ಕಾರ ಉರುಳಿದರೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಜೆಡಿಎಸ್‌ಗೆ ಅವಕಾಶವಿದೆ. ಆದರೆ, ಕಾಂಗ್ರೆಸ್‌ಗೆ ಅಂತಹ ಅವಕಾಶಗಳೇ ಇಲ್ಲ. ಒಂದೊಮ್ಮೆ ಜೆಡಿಎಸ್‌-ಬಿಜೆಪಿ ಮೈತ್ರಿ ಸಾಧ್ಯವಾಗದಿದ್ದರೆ ಆಗ ಚುನಾವಣೆ ನಡೆಯುತ್ತದೆ. ಆಗ ಬಿಜೆಪಿಗೆ ಲಾಭವಾಗಲಿದ್ದು, ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇದಕ್ಕೆ ಕಾಂಗ್ರೆಸ್ಸೇ ಕಾರಣವಾಗುತ್ತದೆ. ಕಾಂಗ್ರೆಸ್‌, ಸರ್ಕಾರ ಉರುಳಲು ಕಾರಣವಾದರೆ ಆಗ ರಾಷ್ಟ್ರಮಟದಲ್ಲಿ ಬಿಜೆಪಿಯೇತರ ರಾಜಕೀಯ ಒಕ್ಕೂಟ ರಚನೆಗೆ ಕೈಜೋಡಿಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲೆ ಮತ್ತಷ್ಟು ಪ್ರತಿಕೂಲ ಪರಿಣಾಮ ಬೀರಲಿದೆ. ಕಾಂಗ್ರೆಸ್‌, ಬಿಜೆಪಿ ಹೊರತಾದ ರಾಜಕೀಯ ಒಕ್ಕೂಟ ರಚಿಸಬೇಕು ಎಂಬ ಕೆಲವು ಪಕ್ಷಗಳ ಕೂಗಿಗೆ ಬಲ ಬಂದು ಇನ್ನಷ್ಟು ಅತಂಕಕ್ಕೆ ಸಿಲುಕಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಮೈತ್ರಿಯಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲ. ಹೀಗಾಗಿ ಆದಷ್ಟು ದಿನ ಅಧಿಕಾರದಲ್ಲಿ ಮುಂದುವರಿಯಲು ಜೆಡಿಎಸ್‌ ಪ್ರಯತ್ನ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next