Advertisement

ದತ್ತಾ, ಮಧು, ಹೊರಟ್ಟಿ ಮನವೊಲಿಕೆಗೆ ಎಚ್ಡಿಡಿ ಯತ್ನ

11:21 AM Jan 05, 2020 | Lakshmi GovindaRaj |

ಬೆಂಗಳೂರು: ಉಪ ಚುನಾವಣೆ ಸೋಲಿನ ನಂತರವೂ ಎಚ್ಚೆತ್ತುಕೊಳ್ಳದ ಬಗ್ಗೆ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಮತ್ತು ಕಾಂಗ್ರೆಸ್‌-ಬಿಜೆಪಿಯತ್ತ ತಮ್ಮ ಶಾಸಕರು ಹಾರಲು ಯತ್ನಿಸುತ್ತಿರುವ ಮಾಹಿತಿಯಿಂದ ಆತಂಕಗೊಂಡಿ ರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯದಲ್ಲಿ ಜೆಡಿಎಸ್‌ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

Advertisement

ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಮಧು ಬಂಗಾರಪ್ಪ, ವೈ.ಎಸ್‌.ವಿ.ದತ್ತಾ, ಬಸವರಾಜ ಹೊರಟ್ಟಿ ಸೇರಿ ಪ್ರಮುಖ ನಾಯಕರ ಮನವೊಲಿಸಿ ಪ್ರಮುಖ ಜವಾಬ್ದಾರಿ ನೀಡಲು ತೀರ್ಮಾನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನೇಮಕ ನೋಡಿಕೊಂಡು ಅಗತ್ಯ ಬಿದ್ದರೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನೂ ಬದಲಾಯಿಸುವ ನಿರ್ಧಾರಕ್ಕೂ ಬಂದಿದ್ದು, ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಜನವರಿ 2ನೇ ವಾರದ ನಂತರ ರಾಜ್ಯ ಪ್ರವಾಸಕ್ಕೆ ರೂಪು-ರೇಷೆ ನಿಗದಿಪಡಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಕೇರಳದಿಂದ ಹತ್ತು ದಿನಗಳ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಮುಗಿಸಿ ಬಂದಿರುವ ಎಚ್‌.ಡಿ.ದೇವೇಗೌಡರು ಪಕ್ಷ ಸಂಘಟನೆ ಸಂಬಂಧ ಸೋಮವಾರ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರ ಜತೆ ಚರ್ಚಿಸಲಿದ್ದಾರೆಂದು ತಿಳಿದು ಬಂದಿದೆ. ರಾಜ್ಯ ಪ್ರವಾಸ ಸಂದರ್ಭದಲ್ಲಿ ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಜಂಟಿಯಾಗಿಯೇ ಹೊರಡಲಿದ್ದಾರೆ. ಜತೆಗೆ, ಪ್ರಮುಖ ನಾಯಕರ ಜತೆಗೂಡಿ ಒಗ್ಗಟ್ಟಿನ ಸಂದೇಶ ರವಾನಿಸುವುದು ರಾಜ್ಯ ಪ್ರವಾಸದ ಉದ್ದೇಶ ಎಂದು ಹೇಳಲಾಗಿದೆ.

ಮನವೊಲಿಕೆ ಕಸರತ್ತು: ಇದಕ್ಕೂ ಮುನ್ನ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ, ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆಂದು ಹೇಳಲಾಗುತ್ತಿರುವ ಮಧು ಬಂಗಾರಪ್ಪ ಅವರ ಜತೆ ಮಾತನಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವೊಲಿಸಲು ತೀರ್ಮಾನಿಸಿದ್ದಾರೆ. ನಂತರ ಬಸವರಾಜ ಹೊರಟ್ಟಿ, ವೈ.ಎಸ್‌.ವಿ. ದತ್ತಾ ಜತೆಯೂ ಮಾತನಾಡಿ ಪಕ್ಷ ಸಂಘಟನೆಗೆ ಜತೆಗೂಡಿ ಹೊಣೆಗಾರಿಕೆ ವಹಿಸಿಕೊಳ್ಳುವಂತೆ ಒಪ್ಪಿಸಲಿದ್ದಾರೆ ಎಂದು ಹೇಳಲಾಗಿದೆ.

ಬಸವರಾಜ ಹೊರಟ್ಟಿ ಹಾಗೂ ಬಂಡೆಪ್ಪ ಕಾಶೆಂಪೂರ್‌ ಅವರ ಜತೆ ಉತ್ತರ ಕರ್ನಾಟಕ ಭಾಗದ ನಾಯಕರ ಸಭೆ ನಡೆಸಿ ಆ ಭಾಗದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಕೊಡುವುದು. ಬಿ.ಎಂ. ಫ‌ರೂಕ್‌ ಅವರಿಗೆ ಕರಾವಳಿ ಭಾಗದ ಹೊಣೆಗಾರಿಕೆ ನೀಡುವುದು. ಹಿಂದುಳಿದ ವರ್ಗಗಳ ಘಟಕದ ಪುನಶ್ಚೇತನಕ್ಕೆ ರಮೇಶ್‌ಬಾಬು ಅವರಿಗೆ ಜವಾಬ್ದಾರಿ ನೀಡುವುದು. ವೈ.ಎಸ್‌.ವಿ.ದತ್ತಾ ಅವರಿಗೆ ಹೊಣೆಗಾರಿಕೆ ನೀಡುವುದು ಸೇರಿದಂತೆ ಹಲವು ತೀರ್ಮಾನಗಳು ಸಂಕ್ರಾಂತಿ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಮಧ್ಯೆ, ನಿಖೀಲ್‌ ಕುಮಾರಸ್ವಾಮಿ ಹಾಗೂ ಪ್ರಜ್ವಲ್‌ ರೇವಣ್ಣ ಸಹ ಪಕ್ಷ ಸಂಘಟನೆಗೆ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ನಿಖೀಲ್‌ ಕುಮಾರಸ್ವಾಮಿ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿದ್ದು, ಪ್ರಜ್ವಲ್‌ ರೇವಣ್ಣಗೂ ಪಕ್ಷದಲ್ಲಿ ಹುದ್ದೆ ಕೊಟ್ಟರೆ ಕುಟುಂಬ ರಾಜಕಾರಣ ಆರೋಪ ಎದುರಾಗುವುದರಿಂದ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಹುದ್ದೆ ಸಾಕು. ಇಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ ಎಂದು ದೇವೇಗೌಡರು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ತಣಿಯುತ್ತಾ ಕೋಪ?: ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಅವಕಾಶಗಳಿದ್ದರೂ ಸಾಮರ್ಥ್ಯ ಇರುವ ನಾಯಕರನ್ನು ಬೆಳೆಸುವ ಕೆಲಸ ಆಗಲಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಎಲ್ಲ ವರ್ಗದವರಿಗೂ ವಿಧಾನಪರಿಷತ್‌, ನಿಗಮ-ಮಂಡಳಿ ಹಾಗೂ ಇತರೆ ನೇಮಕಾತಿಗಳಲ್ಲಿ ಅವಕಾಶ ಮಾಡಿಕೊಡಲಿಲ್ಲ ಎಂಬ ಬೇಸರದಿಂದ ಹಲವರು ಪಕ್ಷದಿಂದ ಒಂದು ಕಾಲು ಹೊರಗಿಡುವ ತಯಾರಿಯಲ್ಲಿದ್ದಾರೆ. ಹೀಗಾಗಿ, ಬೇಸರಗೊಂಡಿರುವವರನ್ನು ಮನವೊಲಿಸಿ ಪಕ್ಷ ಸಂಘಟನೆಗೆ ರೂಪುರೇಷೆ ನಿಗದಿಪಡಿಸಲು ಎಚ್‌.ಡಿ.ದೇವೇಗೌಡರು ಮುಂದಾಗಿದ್ದಾರೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next