Advertisement

HD ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ನೋಟಿಸ್‌

11:34 PM May 07, 2024 | Team Udayavani |

ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಡಿ ವಿಶೇಷ ತನಿಖಾ ದಳದ (ಎಸ್‌ಐಟಿ) ವಶದಲ್ಲಿರುವ ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿ ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಲು ಕೋರ್ಟ್‌ ಆದೇಶಿಸಿ, ವಿಚಾರಣೆ ಯನ್ನು ಬುಧವಾರಕ್ಕೆ (ಮೇ 8) ಮುಂದೂಡಿದೆ.

Advertisement

ಎಚ್‌.ಡಿ.ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಜನಪ್ರತಿ ನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶ ಸಂತೋಷ್‌ ಗಜಾನನ ಭಟ್‌ ಮಂಗಳವಾರ ವಿಚಾರಣೆ ನಡೆಸಿದರು. ಆರೋಪಿ ಎಸ್‌ಐಟಿ ವಶ
ದಲ್ಲಿದ್ದಾಗ ಈ ಹಂತದಲ್ಲಿ ಜಾಮೀನು ಅರ್ಜಿ ವಿಚಾರಣೆ ಮಾಡಬಹುದೇ ಎಂಬ ಬಗ್ಗೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯವು ಎಸ್‌ಐಟಿಗೆ ಆದೇಶಿಸಿ ನೋಟಿಸ್‌ ಜಾರಿಗೊಳಿಸಿದರು.

ನಡೆದ ವಾದವೇನು?
ವಿಚಾರಣೆ ವೇಳೆ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿ, ಈ ಪ್ರಕರಣದಲ್ಲಿ ಅನಗತ್ಯವಾಗಿ ತಮ್ಮ ಕಕ್ಷಿದಾರರನ್ನು ಸಿಲುಕಿಸಲಾಗಿದೆ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದರು. ಆ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾ ಧೀಶರು, ಆರೋಪಿಯು ಎಸ್‌ಐಟಿ ವಶದಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ಮಾಡಲು ಹೇಗೆ ಸಾಧ್ಯ? ಒಂದು ವೇಳೆ ಜಾಮೀನು ನೀಡಿದರೆ ಪೊಲೀಸ್‌ ವಶದಲ್ಲಿರುವುದನ್ನು ಹೇಗೆ ಮುಂದುವರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿ.ವಿ. ನಾಗೇಶ್‌, ಪೊಲೀಸ್‌ ವಶದಲ್ಲಿ ಇದ್ದಾಗಲೂ ಜಾಮೀನು ನೀಡಬ ಹುದು. ಈ ಬಗ್ಗೆ ಇರುವ ಕಾನೂನಿನ ಬಗ್ಗೆ ಹಾಗೂ ಸುಪ್ರೀಂ ಕೋರ್ಟಿನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾ ಲಯದ ಗಮನಕ್ಕೆ ತಂದರು. ಈ ವೇಳೆ ಎಸ್‌ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿ ಪೊಲೀಸ್‌ ವಶದಲ್ಲಿರುವ ವೇಳೆ ಆತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಆಕ್ಷೇಪಣೆ ಸಲ್ಲಿಸಿ ಎಂದು ಎಸ್‌ಐಟಿ ಪರ ವಕೀಲರಿಗೆ ಸೂಚಿಸಿ ನೋಟಿಸ್‌ ಜಾರಿಗೊಳಿಸಿದರು. ಅನಂತರ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next