ಬೆಂಗಳೂರು: ನನಗೆ ಯಾವುದೇ ರಾಹುಕಾಲ, ಗುಳಿಕ ಕಾಲವಿಲ್ಲ. ನಾನು ಯಾವ ಸಮಯದಲ್ಲಿ ಮಾತನಾಡಿದರೂ ಒಳ್ಳೆಯದೇ ಆಗುತ್ತದೆ ಎಂದು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಚರ್ಚೆ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಎಚ್.ಡಿ. ರೇವಣ್ಣ ಅವರು, ರಾಹುಕಾಲ, ಗುಳಿಕ ಕಾಲ ನೋಡಿಕೊಂಡು ಸದನಕ್ಕೆ ಬಂದಿದ್ದಾರೆ. ಅವರಿಗೆ ಈಗಲೇ ಮಾತನಾಡಲು ಕೊಟ್ಟು ಬಿಡಿ ಎಂದಾಗ ರೇವಣ್ಣ ಈ ಮಾತನ್ನು ಹೇಳಿದರು.
ಬುಧವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾದ ಕೂಡಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಮೀಸಲಿಟ್ಟ ವಿಚಾರದಲ್ಲಿ ರೇವಣ್ಣ ಅವರು, ಕಾಂಗ್ರೆಸ್‌ನವರು ಅಷ್ಟು ವರ್ಷ ಅಧಿಕಾರದಲ್ಲಿ ಏನು ಮಾಡಿದ್ದಾರೆ ಎಂದು ಹೇಳಲಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ದೇವೇಗೌಡರ ಕೊಡುಗೆ ಏನು ಎಂದು ಕೇಳಿ ನೋಡಿ ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ದೇವೇಗೌಡರು ಪ್ರಧಾನಿಯಾಗಿ ಕೇಂದ್ರ ಸರಕಾರದಿಂದ 800 ಕೋಟಿ ರೂ. ನೀಡದೇ ಹೋಗಿದ್ದರೆ, 12 ಲಕ್ಷ ಎಕರೆ ನೀರಾವರಿಯಾಗುತ್ತಿರಲಿಲ್ಲ. ಕಾಂಗ್ರೆಸ್‌ನವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾವುದೇ ಕೊಡುಗೆ ನೀಡಿಲ್ಲ. ಬರೀ ರಾಜಕಾರಣ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಉಪ ನಾಯಕ ಯು.ಟಿ. ಖಾದರ್, ಬರೀ ಕಾಂಗ್ರೆಸ್‌ನ್ನು ದೂರುವ ಬದಲು ನೀವು ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ ಎನ್ನುವುದನ್ನು ಹೇಳಿ ಎಂದರು.