ಚನ್ನಪಟ್ಟಣ: ರಾಜ್ಯದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ, ಅವರಿಂದ ನನ್ನನ್ನು ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2006ರಲ್ಲಿ ಬಿಜೆಪಿಯವರೆಲ್ಲ ಮಂಗನ ತರ ಇನ್ನೊಂದು ಪಕ್ಷಕ್ಕೆ ಹಾರಲು ರೆಡಿಯಾಗಿದ್ದರು. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನನ್ನು ಮಂತ್ರಿ ಮಾಡಿ. ಬಿಜೆಪಿಗೆ ರಾಜೀನಾಮೆ ಕೊಡುತ್ತೇನೆ ಎಂದು ಅಂಗಲಾಚಿದ್ದರು ಎಂದು ಕುಟುಕಿದರು.
ರಾಮನಗರ ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡಿಸಲು ಬಂದವರೆಲ್ಲಾ ಕೊನೆಗೆ ಅವರೇ ಇಲ್ಲಿಂದ ಜಾಗ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಜನತೆಯ ಪ್ರೀತಿ ನನ್ನ ಮೇಲೆ ಇರುವವರೆಗೂ ಯಾರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ದೇವೆಗೌಡ ಕುಟುಂಬದ ಕೊಡುಗೆ ಜನರಿಗೆ ಗೊತ್ತಿದೆ: ದೇವೇಗೌಡರ ಕುಟುಂಬದವರ ಕೊಡುಗೆ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಒಡೆದಿಲ್ಲ. ಜನರ ಹಣ ಲೂಟಿ ಮಾಡಿಲ್ಲ. ನಾನು ಈ ಮಣ್ಣಿನ ಮಗ, ಕೊನೆಯುಸಿರೆಳೆಯುವುದು, ಅಂತ್ಯವಾಗುವುದು ರಾಮನಗರದ ಮಣ್ಣಿನಲ್ಲಿಯೇ ಎಂದರು.
ಯಾರ ಜತೆನೂ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ: ಮೈಸೂರು ಮೇಯರ್ ಚುನಾವಣೆಯಲ್ಲಿ ನನ್ನ ಪಕ್ಷದ ಶಕ್ತಿ ಪ್ರದರ್ಶನ ಮಾಡಲೆಂದೇ ಅಭ್ಯರ್ಥಿಯನ್ನು ನಿಲ್ಲಿಸಿದ್ದೆ. ಅಲ್ಲಿ ಬಿಜೆಪಿ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಇದರಿಂದ ಜೆಡಿಎಸ್ ಭವಿಷ್ಯ ಏನಾಗಲಿದೆ ಎಂಬ ಸಂದೇಶವನ್ನು ಚಾಮುಂಡೇಶ್ವರಿ ನೀಡಿದ್ದಾಳೆ ಎಂದರು. ಇದಕ್ಕೂ ಮುನ್ನ ತಾಲೂಕಿನ ವೈ.ಟಿ.ಹಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಿ ದೇವಸ್ಥಾನವನ್ನು ಕುಮಾರಸ್ವಾಮಿ ಉದ್ಘಾಟಿಸಿದರು. ತಾಲೂಕು ಜೆಡಿಎಸ್ ಮುಖಂಡರು ಹಾಜರಿದ್ದರು.
ಚನ್ನಪಟ್ಟಣಕ್ಕೆ ನಾನಿದ್ದೇನೆ:
ಎಚ್‌ಡಿಡಿ ಇಗ್ಗಲೂರು ಜಲಾಶಯ ಕಟ್ಟಿಸಿದಾಗ ಈತ ಹುಟ್ಟಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ, ಅದೇ ಜಲಾಶಯದಿಂದ ನೀರು ತುಂಬಿಸಿ ಆಧುನಿಕ ಭಗೀರಥ ಎಂದು ಬೋರ್ಡು ಹಾಕಿಸಿಕೊಂಡಿದ್ದಾನೆ. ಕಲಾವಿದರ ಕೋಟಾದಲ್ಲಿ ಆಯ್ಕೆ ಆಗಿದ್ದೀಯಾ. ರಾಜ್ಯದಲ್ಲಿ ಸಾಕಷ್ಟು ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಅವರ ಕಷ್ಟ ನೋಡಿಕೋ. ಚನ್ನಪಟ್ಟಣ ನೋಡಿಕೊಳ್ಳಲು ನಾನಿದ್ದೇನೆ ಎಂದು ಎಚ್‌ಡಿಕೆ ಹರಿಹಾಯ್ದರು.