Advertisement

ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು?: ಎಚ್ ಡಿಕೆ ಪ್ರಶ್ನೆ

11:50 AM Nov 18, 2022 | Team Udayavani |

ಮೈಸೂರು: ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ.  ಸಂಸದರು ಕಣ್ಣೀರು ಹಾಕಿರುವುದನ್ನು ಗಮನಿಸಿದ್ದೇನೆ.‌ ಇವರಿಗೆ ಮತ ನೀಡಿದ ಜನರ ಕತೆ ಏನು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು? ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡವಿ ಹಾಕುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಪಂಚರತ್ನ ಯಾತ್ರೆಗೂ ಮುನ್ನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಸಲ್ಲಿಕೆ ಮಾಡಿದರು.

ಪಂಚರತ್ನ ಯಾತ್ರೆಗೆ ಮಳೆಯ ಸಮಸ್ಯೆಯಿಂದ ಮುಂದೂಡಲಾಗಿತ್ತು. ಮುಂದೆ ಯಾವುದೇ ಸಮಸ್ಯೆಯಾಗದಿರಲಿ ಎಂದು ನಂಜುಂಡೇಶ್ವರ ಹಾಗೂ ಚಾಮುಂಡಿ ತಾಯಿಯ ಆಶೀರ್ವಾದ ಪಡೆದಿದ್ದೇನೆ. ಇಂದಿನಿಂದ 36 ದಿನಗಳ ಕಾಲ‌ ಮೊದಲ‌ ಹಂತದ ಯಾತ್ರೆ ಆರಂಭವಾಗುತ್ತಿದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಪಂಚರತ್ನ ಸಮಾರೋಪ ಸಮಾರಂಭ ಮಾಡುತ್ತೇವೆ. ಮಾರ್ಚ್ ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. 123 ಸ್ಥಾನಗಳ ಗುರಿ ‌ಇಟ್ಟು ನಾವು ಹೊರಟಿದ್ದೇವೆ. ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣ ಆಗಬಹುದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಜನತಾ ಪರಿವಾರದಿಂದ ಹೋದವರೇ ಇದ್ದಾರೆ. ಮನಪರಿವರ್ತನೆಯಾಗಿ ಮತ್ತೆ ಪಕ್ಷಕ್ಕೆ ಬರಬಹುದು. ಬಂದಾಗ ಏನು ತೀರ್ಮಾನ ಮಾಡಬೇಕು ನೋಡೋಣ ಎಂದರು.

Advertisement

ಖಾಸಗಿ ಕಂಪನಿ ಮುಂದಿಟ್ಟುಕೊಂಡು ಮತದಾರರ ಡೇಟಾ ಸಂಗ್ರಹ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ಕೆಲವು ತಪ್ಪುಗಳಾಗಿವೆ. ಸರ್ಕಾರದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಡೇಟಾ ಸಂಗ್ರಹ ಮಾಡುವ ಸಿಬ್ಬಂದಿಗಳು ಸರ್ಕಾರಿ ನೌಕರರು ಎಂದು ಮನೆಗಳಿಗೆ ಭೇಟಿ ಕೊಟ್ಟಿರುವ ಮಾಹಿತಿ‌ ಇದೆ. ಸರ್ಕಾರದ ನಡವಳಿಕೆ ಪ್ರತಿಯೊಬ್ಬರಿಗೂ ಸಂಶಯ ಮೂಡುತ್ತದೆ. ಇದರಿಂದ ಬಿಜೆಪಿಯವರು ದೊಡ್ಡ ಸಾಧನೆ ಮಾಡುತ್ತಾರೆ ಎಂಬ ಗಾಬರಿ ನನಗೆ ಇಲ್ಲ. ಈ ಬಾರಿ ಬಿಜೆಪಿ ಏನೇ ಮಾಡಿದರೂ ನಾಡಿನ ಜನರು ಬೇಸತ್ತು ಹೋಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ 20 ವರ್ಷ ನಾವೇ ಅಧಿಕಾರ ನಡೆಸುತ್ತೇವೆ ಅಂತಿದ್ದರು ಈ‌ ಬಾರಿ ಕುತಂತ್ರದಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದರು.

ಪಟ್ಟಿ ಬಿಡುಗಡೆಗೆ ರೇವಣ್ಣ ತಕರಾರು: ಜೆಡಿಎಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಇಂದು ಸಮಯ ಪ್ರಸಕ್ತವಾಗಿಲ್ಲ ಎಂದು ನಮ್ಮ ಪಕ್ಷದ ಜ್ಯೋತಿಷಿ ರೇವಣ್ಣ ತಕರಾರು ತೆಗೆದಿದ್ದಾರೆ. 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next