Advertisement

ಸಿಎಂ ಆದರೆ ಲಚ್ಯಾಣ ಗ್ರಾಮ ದತ್ತು ಪಡೆಯುವೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

08:42 AM Jan 18, 2023 | Team Udayavani |

ಇಂಡಿ: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿ ನಾನು ಸಿಎಂ ಆದರೆ ಸುಕ್ಷೇತ್ರ ಲಚ್ಯಾಣ ಗ್ರಾಮವನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ದಿಪಡಿಸುತ್ತೆನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾನ ಮಾಡಿದರು.

Advertisement

ತಾಲ್ಲೂಕಿನ ಲಚ್ಯಾಣ ಗ್ರಾಮಕ್ಕೆ ಮಂಗಳವಾರ ಸಂಜೆ ಪಂಚರತ್ನ ರಥಯಾತ್ರೆಯ ಮೂಲಕ ಆಗಮಿಸಿ ಸ್ಥಳಿಯ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದ ಬಳಿಕ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ 2005 ರಲ್ಲಿ ಈ ಕ್ಷೇತ್ರಕ್ಕೆ ಬಂದು ಪಡೆದ ಶ್ರೀ ಸಿದ್ಧಲಿಂಗ ಮಹಾರಾಜರ ಆಶಿರ್ವಾದದ ಬಲದಿಂದ ನಾನು ಸಿ.ಎಂ.ಆದೆ ಎಂದು ಸ್ಮರಿಸಿದ ಅವರು, ಮುಂಬರುವ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲ ಗೆಲವು ಸಾಧಿಸಿದರೆ ಅವರನ್ನು ಸಚಿವರನ್ನಾಗಿ ಮಾಡುತ್ತೆನೆ. ಅಧಿಕಾರಕ್ಕೆ ಬಂದರೆ 12000 ಜನಸಂಖ್ಯೆ ಉಳ್ಳ, 2 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈಗ್ರಾಮವನ್ನು ಅಭಿವೃದ್ದಿಪಡಿಸುವೆ, ಮಠಕ್ಕೆ ಬರುವ ಭಕ್ತರಿಗೆ ದರ್ಶನದ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಕ್ರೀಡಾಂಗಣ, ಶಾಲಾ ಕಟ್ಟಡ ನಿರ್ಮಿಸಿ ಸಮಗ್ರ ಅಭಿವೃದ್ಧಿಪಡಿಸುವೆ ಎಂದು ಸಭಿಕರಿಗೆ ಭರವಸೆ ನೀಡಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜಿಲ್ಲೆಯಲ್ಲಿ ನೀರಾವರಿ ಕೆಲಸ ಮಾಡಿಲ್ಲ. ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ನೀರಾವರಿ ಕೆಲಸ ಮಾಡಿದ್ದಾರೆ. ಆಲಮಟ್ಟಿ ಅಣೆಕಟ್ಚು ಎತ್ತರಿಸಿ, ಕಾಲುವೆ ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಹರಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಆಲಮಟ್ಟಿ ಅಣೆಕಟ್ಟನ್ನು ಇನ್ನಷ್ಟು ಎತ್ತರಿಸಿ ಎಲ್ಲ ಕಾಲುವೆ ದುರಸ್ತಿಗೊಳಿಸಲಾಗುವದು. ಭೀಮಾ ನದಿ ಪ್ರವಾಹಕ್ಕೆ ಸಿಲುಕುವ  ಜನರಿಗೆ ಕೊಡಗಿನ ಮಾದರಿಯಲ್ಲಿ ಮನೆ ನಿರ್ಮಿಸಿಕೊಡಲಾಗುವದು ಎಂದು ನುಡಿದರು.

Advertisement

ಜೆಡಿಎಸ್ ಪಕ್ಷದ ಘೊಷಿತ ಅಭ್ಯರ್ಥಿ ಬಿ.ಡಿ. ಪಾಟೀಲ್ ಮಾತನಾಡಿ, ನಾನು ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದವನು. ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಬಾರಿ ಜನರು ನನಗೆ ಆಶಿರ್ವದಿಸಿ ಅವಕಾಶ ನೀಡಿದರೆ ನಿಮ್ಮ ಮನೆಯ ಮಗನಾಗಿ ಜನ ಸೇವೆ ಮಾಡುತ್ತೇನೆ ಎಂದು ವಿನಂತಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಡಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಇತಿಹಾಸ, ಸ್ಥಳಿಯ ಸಮಸ್ಯೆ ಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿವರಿಸಿದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ವಿವಿಧ ಕಲಾ ವಾದ್ಯಮೇಳದೊಂದಿಗೆ ಆಗಮಿಸಿದ  ಪಂಚರತ್ನ ರಥಯಾತ್ರೆಯನ್ನು ಅಭಿಮಾನಿಗಳು ಅದ್ದೂರಿಯಿಂದ ಸ್ವಾಗತಿಸಿದರು.

ಈ ಸಭೆಯಲ್ಲಿ ಜೆಡಿಎಸ್ ಪಕ್ಷದ ಎಸ್. ಸಿ. ಎಸ್.ಟಿ. ಘಟಕದ ರಾಜ್ಯ ಉಪಾಧ್ಯಕ್ಷ ಮರೆಪ್ಪ ಗಿರಣಿವಡ್ಡರ , ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಕಿತ್ತೂರ ಕರ್ನಾಟಕ ವಿಭಾಗದ ಅಧ್ಯಕ್ಷ ವಿಜಯಕುಮಾರ ಭೋಸಲೆ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ, ಪಕ್ಷದ ಮುಖಂಡರಾದ ನಾಗೇಶ ತಳಕೇರಿ, ಅಯ್ಯುಬ್ ನಾಟಿಕಾರ, ಸಿದ್ದು ಡಂಗಾ, ಪೀರಪ್ಪಾ ಹೋಟಗಾರ, ಪಕ್ಷದ ಸ್ಥಳಿಯ ಮುಖಂಡರಾದ ಚಂದ್ರಕಾಂತ ಬಾಬುಳಗಿ, ಎಸ್. ಎಸ್. ಬಿರಾದಾರ, ಕಮರಿಮಠದ ಸೇವಾ ಸಮಿತಿಯ ಸದಸ್ಯ ಎಂ. ಎಸ್. ಮುಜಗೊಂಡ, ನಿವೃತ್ತ ಶಿಕ್ಷಕ ವಿಠ್ಠಲ ಕರಾಳೆ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next