ಬೆಂಗಳೂರು: ನೊಂದ ಮಹಿಳೆಯರ ವೀಡಿಯೋಗಳನ್ನು ಹಂಚುವುದು ಅಪರಾಧ ಎಂದು ಯಾವ ಸೆಕ್ಷನ್‌ನಲ್ಲಿ ಹೇಳಿದ್ದಾರೆ ಎಂದು 1ನೇ ಕ್ಲಾಸ್ ಮಗುವಿನಂತೆ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಅವರದ್ದೇ ಸರಕಾರದ ಅಧೀನದಲ್ಲಿರುವ, ಅವರೇ ಆದೇಶಿಸಿ ರಚಿಸಿರುವ ವಿಶೇಷ ತನಿಖಾ ತಂಡ ಹೊರಡಿಸಿರುವ ಪತ್ರಿಕಾ ಪ್ರಕಟನೆಯಲ್ಲಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಾಕ್ಷಾತ್ ಸಿಎಂ ಗಮನಕ್ಕೆ ಬಂದಿಲ್ಲವೇ? ತಾವು ಸರಕಾರ ನಡೆಸುತ್ತಿರುವಿರೋ ಅಥವಾ ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಂಡಿದ್ದಾರೆ.
ಅಶ್ಲೀಲ ವೀಡಿಯೋಗಳನ್ನು ವೈರಲ್ ಮಾಡಿದ್ದು ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರಿಗೆ “ಎಕ್ಸ್’ ಖಾತೆಯಲ್ಲಿ ತಿರುಗೇಟು ನೀಡಿರುವ ಕುಮಾರಸ್ವಾಮಿ, ಅಶ್ಲೀಲ ವೀಡಿಯೋ ಹಂಚಿಕೆ ಅಪರಾಧ ಎಂದು ಅಪರಾಧ ದಂಡ ಸಂಹಿತೆಯ ಸೆಕ್ಷನ್‌ನ ಮೂಲಕ ಉಲ್ಲೇಖೀಸಿರುವ ಎಸ್‌ಐಟಿಯ ಪತ್ರಿಕಾ ಹೇಳಿಕೆಯನ್ನು ಲಗತ್ತಿಸಿದ್ದಾರೆ. ಮುಖ್ಯಮಂತ್ರಿಗಳು ಸ್ವಯಂಘೋಷಿತ ಸಂವಿಧಾನ ತಜ್ಞರು. ಪ್ರ(ಕು)ಖ್ಯಾತ ಮಾಜಿ ವಕೀಲರು. ನಿಮಗೆ ಈ ಪರಿ ಅಜ್ಞಾನವೇ ಎನ್ನುವುದು ನನಗೆ ಸೋಜಿಗ. ಮಾತೆತ್ತಿದರೆ “ನಾನು ವಕಾಲತ್ತು ಮಾಡುತ್ತಿದ್ದೆ. ಸುಮ್ನೆ ಕೂತ್ಕೊಳ್ಳಿ’ ಎಂದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ತಾವು, ಈಗ ನೀವೇ ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಾನವನ್ನು ವೋಟಿಗೆ ಒತ್ತೆ ಇಟ್ಟ ಕ್ರಿಮಿನಲ…!
ನಿಮ್ಮನ್ನು ಅಪಮಾನಿಸುತ್ತಿದ್ದೇನೆ ಎಂದು ಅನ್ಯತಾ ಭಾವಿಸಬೇಡಿ. ವಯಸ್ಸಿನಲ್ಲಿ ಹಿರಿಯರು, ಹೆಚ್ಚು ಅನುಭಸ್ಥರು ನೀವು. ಆದರೆ, ಪೆನ್ ಡ್ರೈವ್ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪ್ರಶ್ನಾರ್ಹ. ಅಮಾಯಕ ಹೆಣ್ಮಕ್ಕಳ ಮಾನವನ್ನು ವೋಟಿಗೆ ಒತ್ತೆ ಇಟ್ಟ ಕ್ರಿಮಿನಲ್ ಅನ್ನು ಪಕ್ಕದÇÉೇ ಕೂರಿಸಿಕೊಂಡು ಮಾತನಾಡುತ್ತಿದ್ದೀರಿ. ಸಂವಿಧಾನಬದ್ಧವಾಗಿ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನ ದ್ರೋಹಿ ಕೃತ್ಯ ಎಸಗಿರುವ ವ್ಯಕ್ತಿ ನಿಮ್ಮ ಸಂಪುಟದಲ್ಲಿ ಉಪ ಮುಖ್ಯಮಂತ್ರಿ. ಇದಕ್ಕಿಂತ ನಿರ್ಲಜ್ಜತೆ ಉಂಟೇ? ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿತೂರಿ ಸಚಿವ ಸಂಪುಟ:
ನೀವು, ನಿಮ್ಮ ಇಡೀ ಕಾಂಗ್ರೆಸ್ ಪಕ್ಷ ಡಿ. ಕೆ. ಶಿವು ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೀರಿ. ನಿಮ್ಮ ಇಡೀ ಕ್ಯಾಬಿನೆಟ್ ಆ ವ್ಯಕ್ತಿಯ ಹಿತಾಸಕ್ತಿಗಾಗಿ, ಆತ ರೂಪಿಸಿರುವ ಒಳಸಂಚಿನಲ್ಲಿ ಭಾಗಿಯಾಗಿದೆ. ನಿಮ್ಮದು ಕರ್ನಾಟಕ ಸಚಿವ ಸಂಪುವಟವಲ್ಲ, ಅದು ಪಿತೂರಿಯ ಸಚಿವ ಸಂಪುಟ ಎಂದು ಕುಮಾರಸ್ವಾಮಿ ಆರೋಪಿಸಿದರು.