ಬೆಂಗಳೂರು: ಯಾವ ಹಗರಣಗಳೂ ತಾರ್ಕಿಕ ಅಂತ್ಯ ಕಾಣುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿರುವ ಪಿಎಸ್‌ಐ ನೇಮಕಾತಿ ಅಕ್ರಮ ಹಗರಣ ಕೂಡ ಅದೇ ಹಾದಿ ಹಿಡಿಯಲಿದ್ದು, ಹದಿನೈದು ದಿನಗಳಲ್ಲಿ ಈ ಹಗರಣವನ್ನು ಗುಂಡಿ ತೋಡಿ ಮುಚ್ಚಿ ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಾಕಷ್ಟು ಹಗರಣಗಳ ಹಣೆಬರಹ ನೋಡಿದ್ದೇನೆ. ಕೆಲವೇ ದಿನಗಳಲ್ಲಿ ಪಿಎಸ್‌ಐ ಹಗರಣ ಕೂಡ ಈ ಪಟ್ಟಿಗೆ ಸೇರ್ಪಡೆ ಆಗುತ್ತದೆ ಎಂದು ಹೇಳಿದರು.
ಈ ಹಿಂದೆ ಇದೇ ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. ಆಗ ಶಿವಕುಮಾರ್ ಎಂಬವನನ್ನು ಬಂಧಿಸಲಾಯಿತು. ಈಗ ಅವನು ಹೊರಗೆ ಆರಾಮಾಗಿ ಓಡಾಡಿಕೊಂಡಿದ್ದಾನೆ. ಅದೇ ರೀತಿ ಮಾದಕವಸ್ತುಗಳ ಜಾಲ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರಿದ್ದಾರೆ ಎಂದು ಹೇಳಲಾಗಿತ್ತು. ಆಗ ಯಾರು ಅಂತ ನಾನೇ ಕೇಳಿದ್ದೆ. ಯಾರೆಂಬುದೂ ಗೊತ್ತಾಗಲಿಲ್ಲ; ಈಗ ಆ ಕೇಸು ಏನಾಯಿತು? ಲಾಟರಿ ಪ್ರಕರಣ ಏನಾಯಿತು? ಇಂತಹ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು ಎಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ, ಕಾಂಗ್ರೆಸ್ ಆಡಳಿತದಲ್ಲಿ ಕೆಪಿಎಸ್ಸಿ ಶುದ್ಧ ಮಾಡುತ್ತೇವೆ ಅಂತ ಹೊರಟರು. ಆದರೆ ಶ್ಯಾಮ್ ಭಟ್ಟರನ್ನು ತಂದು ಅಲ್ಲಿ ಕೂರಿಸಿದ ಮೇಲೆ ಅಲ್ಲಿ ಉದ್ಯೋಗದ ಮುಕ್ತ ಮಾರುಕಟ್ಟೆ ಶುರುವಾಯಿತು. ಎಸಿ ಹುದ್ದೆಗೆ ಇಷ್ಟು, ಡಿವೈಎಸ್‌ಪಿ ಹುದ್ದೆಗೆ ಇಷ್ಟು ಎಂದು ವ್ಯಾಪಾರ ನಡೆಯಿತು ಎಂದು ಆರೋಪಿಸಿದ ಅವರು, ಭ್ರಷ್ಟಾಚಾರ ಮತ್ತು ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಅಥವಾ ಕಾಂಗ್ರೆಸ್ ನಾಯಕರಾರಿಗೂ ಇಲ್ಲ ಎಂದರು.
ತಮಗೆ ಬೇಕಾದ ವ್ಯಕ್ತಿಯನ್ನು ಕೆಪಿಎಸ್ಸಿಗೆ ನೇಮಿಸಲು ಸಿದ್ದರಾಮಯ್ಯ ನನ್ನ ಮೇಲೆ ಒತ್ತಡ ಹಾಕಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಇವರ (ಕಾಂಗ್ರೆಸ್) ಆಟಕ್ಕೆ ಅವಕಾಶ ಇರಲಿಲ್ಲ. ಆದರೆ ಅವರು ಶಿಫಾರಸು ಮಾಡಿದ ವ್ಯಕ್ತಿಯ ಬಗ್ಗೆ ನನಗೆ ಮಾಹಿತಿ ಇದ್ದ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ಕೆಪಿಎಸ್ಸಿಗೆ ನೇಮಕ ಮಾಡಲಿಲ್ಲ.
– ಎಚ್.ಡಿ. ಕುಮಾರಸ್ವಾಮಿ