ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮುಜುಗರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾನಾಡಿದ ಅವರು, ಪ್ರಧಾನಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡದಿರುತ್ತಿದ್ದರೆ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದ ಮಾತ್ರಕ್ಕೆ ಹಗರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಎನ್ನಲಾಗುವುದಿಲ್ಲ. ಅಮೆರಿಕದಲ್ಲಿ ಅವರಿಗೆ ಆಗಿರುವ ಮುಜುಗರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.
ಅಮೆರಿಕದಲ್ಲಿ ಕೆಲವು ತನಿಖಾ ಸಂಸ್ಥೆಗಳ ಮುಖ್ಯಸ್ಥರು ಪ್ರಧಾನಿಗೆ ಬಿಟ್ ಕಾಯಿನ್ ಹಗರಣದ ಬಗ್ಗೆ ವಿವರಿಸಿದ್ದಾರೆ. ಹೀಗಾಗಿ ಅವರು ಮೌನವಾಗಿದ್ದರೂ ಇಡೀ ಹಗರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹದಿನೈದು ದಿನದಲ್ಲಿ ನಾನೂ ಕೆಲವು ವಿಚಾರಗಳನ್ನುಬಹಿರಂಗಪಡಿಸಲಿದ್ದೇನೆ ಎಂದರು.
ಹಾದಿ ತಪ್ಪಿಸುವುದು ಬೇಡ:
ಕಾಂಗ್ರೆಸ್ ನಾಯಕರು ತನಿಖೆಯ ಹಾದಿ ತಪ್ಪಿಸುವುದು ಬೇಡ.ನಿಖರವಾಗಿ ಯಾವ ರಾಜಕೀಯ ಮುಖಂಡರಿಗೆ ಅಥವಾ ಅಧಿಕಾರಿಗೆ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ದಾಖಲೆ ನೀಡುವುದು ಸೂಕ್ತ. ಆಗ ಜನರಿಗೂ ಸರಿಯಾದ ಮಾಹಿತಿ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.