ಕೊಪ್ಪಳ: ಕುಟುಂಬ ರಾಜಕಾರಣ ಎಲ್ಲ ಪಕ್ಷದಲ್ಲೂ ಇದೆ. ಬಿಜೆಪಿಯಲ್ಲಿ ಇರುವಷ್ಟು ಕುಟುಂಬ ರಾಜಕಾರಣ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಒಂದೇ ಕುಟುಂಬದಲ್ಲಿ ಎರಡು ಮೂರು ಹುದ್ದೆ ಅನುಭವಿಸುತ್ತಿದ್ದಾರೆ. ಪಟ್ಟಿ ಸಮೇತ ಕೊಡುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕುಷ್ಟಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಾರು ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕೆನ್ನುವುದು ಅವರಿಗೆ ಬಿಟ್ಟ ವಿಚಾರ. ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ. ಜಡ್ಜ್ ಮಕ್ಕಳು ಜಡ್ಜ್ ಆಗುತ್ತಾರೆ. ಐಎಎಸ್ ಮಕ್ಕಳು ಐಎಎಸ್ ಆಗುತ್ತಾರೆ. ಹಾಗೆಯೇ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು ಆಗುವುದರಲ್ಲಿ ತಪ್ಪೇನಿದೆ? ಅಮಿತ್ ಶಾ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರ ಮಗನಿಗೆ ಬಿಸಿಸಿಐನಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ. ಅವರಿಗೆ ಏನು ಅನುಭವವಿದೆ ಎಂದು ಸ್ಥಾನ ಕೊಟ್ಟಿದ್ದಾರೆ. ಕ್ರೀಡೆಯಲ್ಲಿ ಅವರ ಕೊಡುಗೆ ಏನಿದೆ? ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಶಾ ಅವರು ಮಗನಿಗೆ ಅ ಧಿಕಾರ ಕೊಟ್ಟಿದ್ದಾರೆ. ಜೆಡಿಎಸ್ ಬಗ್ಗೆ ಮಾತನಾಡಲು ಅವರಿಗೇನು ನೈತಿಕತೆಯಿದೆ ಎಂದರು.
ಕಾಂಗ್ರೆಸ್-ಬಿಜೆಪಿ ಎರಡೂ ಜೆಡಿಎಸ್‌ಗೆ ಮತ ಕೊಡಬೇಡಿ ಎನ್ನುತ್ತಿವೆ. ಇನ್ಯಾರಿಗೆ ಜನರು ಮತ ಕೊಡಬೇಕು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರವಾಗಿದೆ. ಅಲ್ಲಿ ಬಿಜೆಪಿಯವರು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಂಚರತ್ನದ ಸುನಾಮಿ ಅಲೆ ಎದ್ದಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಇದನ್ನು ತಡೆದುಕೊಳ್ಳಲಿ. ಉತ್ತರ ಕರ್ನಾಟಕದಲ್ಲಿ 40-50 ಸ್ಥಾನ ಗೆಲ್ಲಲಿದ್ದೇವೆ. ಜೆಡಿಎಸ್‌ಗೆ ಏಲ್ಲಿ ಅಭ್ಯರ್ಥಿಗಳು ಇಲ್ಲವೋ ಅಲ್ಲಿ ಹೊಸ ಮುಖಗಳಿಗೆ ಟಿಕೆಟ್ ಕೊಡಲಿದ್ದೇವೆ. ಹಾಸನದ ಟಿಕೆಟ್ ವಿವಾದ ಸುಗಮವಾಗಿ ಬಗೆಹರಿಯಲಿದೆ ಎಂದರು.
ಇದನ್ನೂ ಓದಿ: ವಿಮಾನದ ಒಳಗಿನ ಘಟನೆಗಳ ನೈಜ ವರದಿಗಾಗಿ “ಕೊರುಸನ್’ ಬಳಕೆ: ಏರ್ ಇಂಡಿಯಾ