Advertisement

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

07:23 PM Apr 17, 2024 | Team Udayavani |

ಹುಣಸೂರು:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಲೆಲ್ಲಾ ಬರಗಾಲ ಬರುತ್ತೆ, ಯಾವುದೇ ಅಭಿವೃದ್ದಿ ಮಾಡದಿದ್ದರೂ ಪ್ರಚಾರಕ್ಕಾಗಿ 350ಕೋಟಿ ರೂ. ಖರ್ಚು ಮಾಡಿದೆ. ಇದೊಂದು ದರಿದ್ರ ಸರಕಾರವಾಗಿದ್ದು, ದೇಶದ ಅಭಿವೃದ್ದಿಯನ್ನೇ ಅಜೆಂಡವಾಗಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

Advertisement

ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಮಂತ್ರಿ ಎಸ್.ಎ.ರಾಮದಾಸ್ ಮತ್ತಿತರ ಮುಖಂಡರೊಂದಿಗೆ ಬೃಹತ್ ರೋಡ್ ಶೋ ನಡೆಸಿದ ನಂತರ ಸಂವಿಧಾನ ಸರ್ಕಲ್‌ನಲ್ಲಿ ಪ್ರಚಾರ ಭಾಷಣ ಮಾಡಿದ ಅವರು ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ 11ತಿಂಗಳಲ್ಲಿ ದುರಾಡಳಿತ ನಡೆಸುತ್ತಿದೆ. ಇದೊಂದು ದರಿದ್ರ ಸರಕಾರವಾಗಿದ್ದು, ಬರೀ ಪ್ರಚಾರದ್ದೇ ಭರಾಟೆಯಾಗಿದೆ. ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬಂದು ರೈತರು ಸಂಕಷ್ಟ ಎದುರಿಸುತ್ತಾರೆಂದು ಛೇಡಿಸಿದರು.

ಮೋದಿ ಬಂದರೆ ಸಂವಿಧಾನ ಬದಲಾಯಿಸುತ್ತಾರೆ. ಮೀಸಲಾತಿ ವಿರೋಧಿಸುತ್ತಾರೆಂದು ಅಪಪ್ರಚಾರ ನಡೆಸುವ ಕಾಂಗ್ರೆಸ್ ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿ, ಇದೀಗ ಅವರ ಬಗ್ಗೆ ಗುಣಗಾನ ಮಾಡುತ್ತಿರುವುದು ನಾಚಿಕೆಗೇಡು. ಇಂತಹ ಮೋಸಗಾರರ ನಂಬದೆ ದೇಶದ ಅಭಿವೃದ್ದಿಯನ್ನೇ ಅಜೆಂಡವಾಗಿಸಿಕೊಂಡಿರುವ ಬಿಜೆಪಿಯ ಅಭ್ಯರ್ಥಿ ಯದುವೀರ್‌ರನ್ನು ಗೆಲ್ಲಿಸಿರೆಂದರು.

ತಮ್ಮನ್ನು ಮನೆ ಮಗನೆಂದು ಹುಣಸೂರಿಗೆ ಬಂದಾಗಲೆಲ್ಲಾ ಪ್ರೀತಿ ತೋರಿದ್ದೀರಾ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಮಂಡ್ಯದಿಂದ ನಾನು ಗೆಲ್ಲುತ್ತೇನೆ. ಇಲ್ಲಿ ಯದುವೀರ್ ಗೆಲ್ಲೋದು ಶತಸಿದ್ದ. ಮೋದಿ ಸರಕಾರ ಅಧಿಕಾರಕ್ಕೆ ಬರಲಿದ್ದು, ಈ ಭಾಗದ ತಂಬಾಕು ಬೆಳೆಗಾರರ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುವೆ. ಸೌಮ್ಯ ಸ್ವಭಾವದ ಯದುವೀರ್ ಒಡೆಯರನ್ನು ಹೆಚ್ಚಿನ ಮತ ನೀಡಿರೆಂದು ಮನವಿ ಮಾಡಿದರು.

ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿ ವಿಶೇಷ ಭಾರತ ನಿರ್ಮಾಣದ ಸಂಕಲ್ಪ ತೊಟ್ಟಿರುವ ಮೋದಿಯವರ ಕನಸನ್ನು ನನಸಾಗಿಸಲು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿ, ನಮ್ಮ ಕುಟುಂಬ ಈ ನಾಡಿನ ಪ್ರಗತಿಗೆ ನೀಡಿರುವ ಕೊಡುಗೆಯಂತೆ ತಾವು ಕೂಡ ಅದೇರೀತಿ ಕೆಲಸ ಮಾಡುವೆನೆಂದರು.

Advertisement

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ಕಾಂಗ್ರೆಸ್ ಸರಕಾರದಿಂದ ಯಾವುದೇ ಅಭಿವೃದ್ದಿ ಕೆಲಸವಾಗುತ್ತಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಸೇರಿದಂತೆ ಅನೇಕ ಜನಪರ, ರೈತಪರ ಮಾಡಿದ್ದಾರೆ. ಕುಮಾರಣ್ಣ ಗೆದ್ದು ಮಂತ್ರಿಯಾಗೋದು, ಐದು ಲಕ್ಷ ಮತಗಳ ಅಂತರದಲ್ಲಿ ಯದುವೀರ್ ಒಡೆಯರ್ ಗೆಲ್ಲುವುದು ಗ್ಯಾರಂಟಿಯಾಗಿದ್ದು, ತಾಲೂಕಿನ ಮತದಾರರು ಹೆಚ್ಚು ಮತ ನೀಡುವಂತೆ ಮನವಿ ಮಾಡಿದರು.

ರ‍್ಯಾಲಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷೆ ಮಂಗಳಸೋಮಶೇಖರ್, ನಗರ ಅಧ್ಯಕ್ಷ ನಾರಾಯಣ್, ಜಿಲ್ಲಾ ಉಪಾಧ್ಯಕ್ಷೆ ಸವಿತಾಚವಾಣ್, ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಮಹಿಳಾ ಅಧ್ಯಕ್ಷೆ ಯಶೋಧತಾಂಡವಮೂರ್ತಿ, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತೀಶ್‌ಪಾಪಣ್ಣ ಮತ್ತಿತರರಿದ್ದರು.

ತುರ್ತು ಕರೆಯ ಮೇರೆಗೆ ರ‍್ಯಾಲಿಯಲ್ಲಿ ಕೆಲಹೊತ್ತು ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅರ್ಧದಲ್ಲೇ ಮೊಟಕುಗೊಳಿಸಿ ಮೈಸೂರಿನತ್ತ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next