ಮಂಡ್ಯ: ಪ್ರಸ್ತುತ ದೇಶದಲ್ಲಿ ರೈತರ ಶ್ರಮಕ್ಕೆ ಸರಿಯಾದ ಫಲ ಸಿಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ . ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಹಿರಿಯಮ್ಮ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆವರಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ರೈತರು ಸುಖಕ್ಕಾಗಿ ದೇವರಲ್ಲಿ ಪ್ರಾರ್ಥನೆ: ದೇವರು ಈ ನಾಡಿಗೆ ಮಳೆ ಬೆಳೆ ಚೆನ್ನಾಗಿ ಅಗಿ ರೈತರು ಸುಖವಾಗಿ ಜೀವನ ನಡೆಸುವಂತಾಗಲಿ. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅವರ ಬೆವರಿನ ದುಡಿಮೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿ ರೈತರು ಸುಖದಿಂದ ಬಾಳುವಂತಾಗಲೆಂದು ದೇವರಲ್ಲಿ ಪ್ರಾರ್ಥಿ ಸುವುದಾಗಿ ತಿಳಿಸಿದರು.
ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಾಗಿದೆ. ಇಲ್ಲದಿದ್ದರೆ ಇನ್ನೂ ಸಂಕಷ್ಟಕ್ಕೆ ರೈತರು ಸಿಲುಕಲಿದ್ದು, ತೊಂದರೆ ಅನುಭವಿಸಲಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸೇಬಿನ ಹಾರ ಹಾಕಿ ಸ್ವಾಗತ: ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಯಲಿಯೂರು ವೃತ್ತದ ಬಳಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕ್ರೇನ್ ಮೂಲಕ ಬೃಹತ್‌ಸೇಬಿನ ಹಾರ ಹಾಕಿ ಅಭಿನಂದಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ತಿಮ್ಮೇಗೌಡ,ಕೆ.ಟಿ.ಸಂತೋಷ್, ದೇವಾಲಯದ ಟ್ರಸ್ಟ್‌ನ ಅಧ್ಯಕ್ಷ ಕೆ.ಎಚ್.ತಿಮ್ಮೇಗೌಡ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ರೈತ ಮುಖಂಡರಿಂದ ಮಾಜಿ ಸಿಎಂ ಕುಮಾರಸ್ವಾಮಿಗೆ ಮನವಿ :
ತಮಿಳುನಾಡು ಕಾವೇರಿ ನದಿಗೆ ವೆಲ್ಲಾರು, ವೈಗೈ ಹಾಗೂ ಗುಂಡರ್ ನದಿಗಳನ್ನು ಜೋಡಣೆ ಮಾಡುತ್ತಿರುವ ಯೋಜನೆಗೆ ತಡೆ ಹಿಡಿಯಬೇಕು. ಜತೆಗೆ ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಗೆ ವಹಿಸದಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಕುಮಾರಸ್ವಾಮಿ, ಈಗಾಗಲೇ ಕಾವೇರಿ ನದಿ ಜೋಡಣೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇನೆ. ಮೈಷುಗರ್ ಕಾರ್ಖಾನೆಯನ್ನು ಸಹ ಖಾಸಗಿ ವಹಿಸದಂತೆ ಸರ್ಕಾರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ರೈತ ನಾಯಕಿ ಸುನಂದಜಯರಾಂ, ಇಂಡುವಾಳು ಚಂದ್ರಶೇಖರ್ ಸೇರಿದಂತೆ ಮತ್ತಿತರರಿದ್ದರು