Advertisement

ಅಚ್ಛೇದಿನದ ಅಸಲಿಯತ್ತಿನ ಬಗ್ಗೆ ದೊಡ್ಡ ಪ್ರಶ್ನೆಯೇ ಮೂಡಿದೆ: ಕುಮಾರಸ್ವಾಮಿ

01:00 PM Oct 03, 2022 | Team Udayavani |

ಬೆಂಗಳೂರು: ಆರ್ಥಿಕ ಅಸಮಾನತೆ, ಬಡತನ, ನಿರುದ್ಯೋಗ ಅತ್ಯಂತ ಅಪಾಯಕಾರಿ ಎಂದು ಬಿಜೆಪಿ ಮಾತೃಸಂಸ್ಥೆ ಆರ್ ಎಸ್ಎಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿರುವ ಈ ಹೇಳಿಕೆ ಭಾರತದ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿ. ಈಗ ಅಚ್ಛೇದಿನದ ಅಸಲಿಯತ್ತಿನ ಬಗ್ಗೆ ದೊಡ್ಡ ಪ್ರಶ್ನೆಯೇ ಮೂಡಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವ ಅವರು, ಕಳೆದ 7 ವರ್ಷದ ಬಿಜೆಪಿ ಆಡಳಿತದಲ್ಲಿ ಯಾರು ಉದ್ಧಾರ ಆಗಿದ್ದಾರೆ? ಯಾರು ಹಾಳಾಗಿದ್ದಾರೆ? ಎನ್ನುವುದನ್ನು ಹೇಳಲು ವಿಶೇಷ ಪಾಂಡಿತ್ಯವೇನೂ ಬೇಕಿಲ್ಲ. 20 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. 4 ಕೋಟಿ ಯುವಕರಿಗೆ ಉದ್ಯೋಗವೇ ಇಲ್ಲ ಎಂದು ಹೊಸಬಾಳೆ ಅವರೇ ಹೇಳಿದ್ದಾರೆ. ಹಾಗಾದರೆ, ಕಳೆದ 7 ವರ್ಷಗಳಲ್ಲಿ ಶ್ರೀಮಂತರಾದವರು ಯಾರು? 23 ಕೋಟಿ ಜನರ ದಿನದ ಆದಾಯ 375 ರೂ.ಗಿಂತ ಕಡಿಮೆ ಇದೆ. ಆದರೆ, ಉದ್ಯಮಿ ಒಬ್ಬರು ಗಂಟೆಗೆ 42 ಕೋಟಿ, ವಾರಕ್ಕೆ 6,000 ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ! ಇದು ಸದ್ಯದ ಭಾರತದ ಚಿತ್ರಣ. ದೇಶದ ಶೇ.20ರಷ್ಟು ಆದಾಯ ಶೇ.1ರಷ್ಟು ಜನರ ಕೈಯ್ಯಲ್ಲಿದೆ ಎಂದರೆ ಇದಕ್ಕಿಂತ ಆಘಾತಕಾರಿ ಸಂಗತಿ ಮತ್ತೊಂದು ಇದೆಯಾ? ಇದು ಹೊಸಬಾಳೆ ಅವರ ಪ್ರಶ್ನೆ ಎಂದಿದ್ದಾರೆ.

ಭಾರತದ ಉದ್ದಗಲಕ್ಕೂ ಅಪೌಷ್ಠಿಕತೆ ತಾಂಡವವಾಡುತ್ತಿದೆ. ಲಕ್ಷೋಪಲಕ್ಷ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರೇ ಇಲ್ಲ. ಸತ್ಯ ಸ್ಥಿತಿ ಹೀಗಿದ್ದ ಮೇಲೆ ಅಚ್ಛೇದಿನದ ಆತ್ಮಾವಲೋಕನಕ್ಕೆ ಅಂಜಿಕೆ ಏಕೆ? ಸಮೀಕ್ಷೆಗಳು ಹೇಳಿದ ಸತ್ಯವನ್ನೇ ಹೊಸಬಾಳೆ ಅವರು ಹೇಳಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮಹಾ ಆಕ್ರೋಶಕ್ಕೆ ಕಾರಣವಾದರೂ ಅಚ್ಚರಿ ಇಲ್ಲ. ‘ಕಾರ್ಪೋರೇಟ್ ರಾಜ್ಯ’ದ ಕಬಂಧ ಬಾಹುಗಳಲ್ಲಿ ಭಾರತ ಸಿಕ್ಕಿಬಿದ್ದಿರುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. ಜನರ ಅಸಹನೆ, ಬೇಗುದಿ ದಿನೇದಿನೆ ಹೆಚ್ಚುತ್ತಿದೆ. ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದು ಎಚ್ ಡಿಕೆ ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲೂ ಭಾರತದ ಮೇಲೆ ಆರ್ಥಿಕ ಅಸಮಾನತೆಯ ಕಪ್ಪುಚುಕ್ಕೆ ಇದೆ. ದೇಶದಲ್ಲಿ ಇನ್ನೂ ಒಪ್ಪತ್ತಿನ ಊಟಕ್ಕೂ ತತ್ವಾರ ಇರುವ ಜನರೂ ಇದ್ದಾರೆಂದರೆ ಅದು ‘ರಾಷ್ಟ್ರೀಯ ಅಪಮಾನ’ ಅಲ್ಲದೆ ಮತ್ತೇನು? ಹೊಸಬಾಳೆ ಅವರು ನೀಡಿರುವ ಅಂಕಿ-ಅಂಶ ನನಗೆ ಆಘಾತ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next