Advertisement

ಜೈಲುಗಳು ಸಾವಿನ ಕೂಪವಾಗಿದೆ: ಆರಗ ಜ್ಞಾನೇಂದ್ರ ವಿರುದ್ಧ ಎಚ್ ಡಿಕೆ ಕಿಡಿ

10:32 AM Jan 06, 2023 | Team Udayavani |

ಬೆಂಗಳೂರು: 2021ರ ರಾಷ್ಟ್ರೀಯ ಅಪರಾಧ ದಾಖಲೆಗಳ (ಎನ್ ಸಿಆರ್ ಬಿ) ಬ್ಯೂರೋ ವರದಿ ಪ್ರಕಾರ ಕರ್ನಾಟಕದ ಜೈಲುಗಳಲ್ಲಿ ಅನಾರೋಗ್ಯದ ಕಾರಣ 58 ಕೈದಿಗಳು ಸಾವೀಗೀಡಾಗಿದ್ದಾರೆ. ರಾಜ್ಯದ ಗೃಹ ಸಚಿವ ಅರಗ ಜ್ಷಾನೇಂದ್ರ ಅವರೇ, ನಿಮ್ಮ ಸರ್ಕಾರದ ಆಡಳಿತದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಏನಾದರೂ‌ ಇದೆಯಾ? ಜೈಲುಗಳು ಸಾವಿನ ಕೂಪ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ಸರಣಿ ಟ್ವೀಟ್ ಮಾಡಿರುವ ಅವರು, ನಿಮ್ಮದೇ ಪಕ್ಷದ ಕಾರ್ಯಕರ್ತರಿಗೂ ಜೀವರಕ್ಷಣೆ ಇಲ್ಲ. ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೂ ಸಮರ್ಪಕ ಆರೋಗ್ಯ ವ್ಯವಸ್ಥೆ ಕಲ್ಪಿಸಲು ವಿಫಲರಾಗಿದ್ದೀರಿ. ಮಾನವ ಹಕ್ಕುಗಳು ನಿಮ್ಮ ಪಾಲಿಗೆ ತಮಾಷೆಯ ಸಂಗತಿ ಇರಬೇಕೇನೋ. ನಿಮಗೆ ಅಧಿಕಾರ ಕೊಟ್ಟ ಕನ್ನಡಿಗರ ದೌರ್ಭಾಗ್ಯ ಇದು ಎಂದು ಟೀಕಿಸಿದ್ದಾರೆ.

ಸಾವಿಗೀಡಾದ 58 ಕೈದಿಗಳಲ್ಲಿ 16 ಮಂದಿ ಹೃದಯಾಘಾತ, 11 ಜನ ಶ್ವಾಸಕೋಶ ಸಂಬಂಧಿ ಕಾಯಿಲೆ, ಉಳಿದವರು ಎಚ್ ಐವಿ & ಟಿ.ಬಿ., ಯಕೃತ್ತು, ಕಿಡ್ನಿ, ಕ್ಯಾನ್ಸರ್ ಸಮಸ್ಯೆಗಳಿಂದ ಬಳಲುತ್ತಿದ್ದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಾರ ಬೆಂಗಳೂರಿನ ಕಾರಾಗೃಹಗಳಲ್ಲಿರುವ 8,681 ಕೈದಿಗಳಿಗೆ ಸಮರ್ಪಕ ಆರೋಗ್ಯ ಸೇವೆಯ ಅಗತ್ಯವಿತ್ತು. ಆದರೆ, ಕೇವಲ 2,537 ಮಂದಿಗೆ ಮಾತ್ರ ವೈದ್ಯಕೀಯ ನೆರವು ಸಿಕ್ಕಿದೆ. ಜೈಲುಗಳೂ ಅಸಮರ್ಪಕ ಅವ್ಯವಸ್ಥೆಯಿಂದ ಕೊಳೆಯುತ್ತಿರುವ ಸಂಗತಿ 40% ಕಮಿಷನ್ ಸರ್ಕಾರಕ್ಕೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಂಧೀಖಾನೆಗಳಲ್ಲಿ 80 ಜನರ ಆರೋಗ್ಯ ಸಿಬ್ಬಂದಿಯ ಅಗತ್ಯ ಇದೆ. ಅಂಕಿ-ಸಂಖ್ಯೆಯ ಪ್ರಕಾರ ಕೇವಲ 31 ಮಂದಿಯ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ ಸಿ ಆರ್ ಬಿ ವರದಿ ಬಹಿರಂಗಗೊಳಿಸಿದೆ. 27 ಮಂದಿ ಆರೋಗ್ಯ ವೈದ್ಯಕೀಯ ಅಧಿಕಾರಿಗಳ ಬದಲಿಗೆ 9 ಜನ ಅಧಿಕಾರಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. 499 ಕೈದಿಗಳಿಗೆ ಒಬ್ಬ ಆರೋಗ್ಯ ಸಿಬ್ಬಂದಿ ಕೆಲಸ ಮಾಡುತ್ತಿರುವ ಸಂಗತಿ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕಿದೆ. ಅರಗ ಜ್ಞಾನೇಂದ್ರ ಅವರೆ, ನಿಮ್ಮ ಆಡಳಿತದಲ್ಲಿ ಸಾಮಾನ್ಯ ರೈತನಿಗಾಗಲಿ, ಕೆಲಸ ಸಿಗದೇ ಪರಿತಪಿಸುತ್ತಿರುವ ಯುವಕ-ಯುವತಿಯರಿಗಾಗಲಿ, ಕಮಿಷನ್ ದಂಧೆಯಲ್ಲಿ ಹೈರಾಣಾಗಿ ಜೀವ ಕಳೆದುಕೊಳ್ಳುತ್ತಿರುವ ಗುತ್ತಿಗೆದಾರರಿಗಾಗಲಿ, ಅಧಿಕಾರಿ ವರ್ಗವಾಗಲಿ, ಕಾರ್ಮಿಕರಾಗಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದ್ದಾರೆ.

ಆಡಳಿತ ನಡೆಸಲು ಬಾರದ ನಿಮಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಿ. ನಿಮ್ಮ ದುರಾಡಳಿತದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಹೆಸರು ಮೂರುಕಾಸಿಗೆ ಹರಾಜಾಗಿದೆ. ನಿಮ್ಮಿಂದಾಗಿ‌ ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಟೀಕಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next