Advertisement

HD Kumaraswamy: ನೂರು ಸಿದ್ದರಾಮಯ್ಯ ಬೇಡ; ಒಬ್ಬ ಜಮೀರ್‌ನ ಎದುರಿಸಲಿ

01:39 AM Aug 23, 2024 | Team Udayavani |

ಬೆಂಗಳೂರು: ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಸತಿ ಸಚಿವ ಜಮೀರ್‌ ಅಹ್ಮದ್‌ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

Advertisement

ನೂರು ಸಿದ್ದರಾಮಯ್ಯ ಬಂದರೂ ಏನೂ ಮಾಡಲಾಗದು ಎಂದು ಕುಮಾರಸ್ವಾಮಿ ಹೇಳುತ್ತಾರೆ; ಅವರು ಒಬ್ಬ ಜಮೀರ್‌ನನ್ನು ಎದುರಿಸಲಿ ಸಾಕು ಎಂದು ಸವಾಲು ಹಾಕಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ನಾನು ಎರಡು ಬಸ್‌ಗಳಿಗೆ ಒಂದೇ ನಂಬರ್‌ ಪ್ಲೇಟ್‌ ಹಾಕಿ ಓಡಿಸುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಿದ್ದರೆ ನನ್ನನ್ನು ನಿಮ್ಮ ಜತೆ ಹೇಗೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ಕೇಳಲು ಎಚ್‌.ಡಿ. ಕುಮಾರಸ್ವಾಮಿಗೆ ನೈತಿಕತೆ ಇಲ್ಲ. ಲೋಕಾಯುಕ್ತ ತನಿಖೆ ಆಧಾರದ ಮೇಲೆ ಅಕ್ರಮ ನಡೆದಿರುವುದು ಸಾಬೀತು ಅನಂತರ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಎಸ್‌ಐಟಿ ಮನವಿ ಮಾಡಿ ಹತ್ತು ತಿಂಗಳು ಕಳೆದಿದೆ. ಆದರೆ ಸಿದ್ದರಾಮಯ್ಯ ವಿರುದ್ಧ ನೀಡಿರುವುದು ಖಾಸಗಿ ದೂರು.

ಎಫ್‌ಐಆರ್‌ ಆಗಿಲ್ಲ, ತನಿಖೆ ನಡೆದಿಲ್ಲ. ದೂರು ನೀಡಿದ ದಿನವೇ ನೋಟಿಸ್‌ ನೀಡಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು. ಗಣಿ ಅಕ್ರಮ ಸಾಬೀತು ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರು ಮೊದಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಿತ್ತು. ಆದರೆ ಈವರೆಗೂ ನೀಡಿಲ್ಲ. ನೈತಿಕತೆ ಹೊತ್ತು ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದರು.

ಎಚ್‌ಡಿಕೆ ಬಂಧನಕ್ಕೆ ಪಿಸಿ ಅಲ್ಲ, ಐಪಿಎಸ್‌ ಅಧಿಕಾರಿ ಬೇಕು:ಬಿ.ಕೆ. ಹರಿಪ್ರಸಾದ
ಹಾವೇರಿ: ಕುಮಾರಸ್ವಾಮಿ ಕೇಂದ್ರ ಸಚಿವರು. ಅವರ ಹುದ್ದೆಗೆ ತಕ್ಕಂತೆ ಯಾರಾದರೂ ಐಪಿಎಸ್‌ ಅಧಿ ಕಾರಿ ಹೋಗಿ ಪ್ರಶ್ನೆ ಮಾಡುತ್ತಾರೆ. ಕಾನ್‌ಸ್ಟೆಬಲ್‌ ಹೋಗಿ ಬಂಧಿಸಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರೂ ಯಾರನ್ನೂ ಹೆದರಿಸಲು ಆಗುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಡಾ ಪ್ರಕರಣದ ಕುರಿತು ಆರೋಪ, ಪ್ರತ್ಯಾರೋಪ ಆಗುತ್ತಿವೆ. ಈ ಬಗ್ಗೆ ದೇಸಾಯಿ ಆಯೋಗ ನೇಮಕವಾಗಿದೆ. ಆಯೋಗ ವರದಿ ಕೊಟ್ಟ ಅನಂತರ ವೈಟ್ನರ್‌ ಹಚ್ಚಿದ್ದಾರಾ? ಶಾಯಿ ಹಾಕಿದ್ದಾರಾ? ಎಂಬುದು ಗೊತ್ತಾಗುತ್ತದೆ ಎಂದರು. ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ, ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗುವ ರೀತಿ ನಡೆದು ಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ನಮ್ಮ ಹಕ್ಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next