ವಿಧಾನಸಭೆ: ನಾನು ಇನ್ನು ಮುಂದೆ ತಾಜ್ ವೆಸ್ಟೆಂಡ್‌ನಲ್ಲಿ ವಾಸ ಮಾಡುವುದಿಲ್ಲ. ಇನ್ನು ಮುಂದೆ ಏನಿದ್ದರೂ, ಕರ್ಮ ಭೂಮಿ ರಾಮನಗರದ ಕೇತಗಾನಹಳ್ಳಿಯಲ್ಲಿ ವಾಸ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಲ್ಟನ್ ರೆಸಾರ್ಟ್ ಅಕ್ರಮವಾಗಿ ಸ್ಥಾಪಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ಹೇಳಿದ ಅವರು, ನಾನು ಯಾರ ಪರವಾಗಿಯೂ ಇಲ್ಲ ವಾಸ್ತವದ ಪರವಾಗಿ ಮಾತನಾಡುತ್ತೇನೆ. ಯಾರಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ಸ್ವಭಾವ ಬೆಳೆಸಿಕೊಂಡಿದ್ದೇನೆ. ನಾನು 1985 ರಲ್ಲಿಯೇ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಆಗಲೇ ಒಂದು ವರ್ಷದಲ್ಲಿ 4 ಲಕ್ಷ ರೂ. ಬಾಳೆ ಬೆಳೆದಿದ್ದೇನೆ.
ಇದನ್ನೂ ಓದಿ:ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯ ಆವರಣದಲ್ಲೇ ಕೊನೆಯುಸಿರೆಳೆದ ಸರಕಾರಿ ನೌಕರ
ನಮ್ಮ ತಂದೆಗೆ ಏನೋ ಹುಚ್ಚು ರೈತರ ಮಕ್ಕಳು ಜಮೀನು ಹೊಂದಿರಬೇಕು ಎಂದು ಜಮೀನು ತೆಗೆದುಕೊಳ್ಳಲು ಹೇಳಿದ್ದರು. ನಮ್ಮನ್ನು ಮಣ್ಣಿನ ಮಕ್ಕಳು ಎಂದು ಕೆಲವರು ಆಡಿಕೊಳ್ಳುತ್ತಾರೆ. ನಾನು ಸಿನೆಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ಜಮೀನು ಖರೀದಿಸಿದ್ದೆ. ಅದರ ವಿರುದ್ಧವೂ ಅಕ್ರಮ ಜಮೀನು ಕಬಳಿಸಿದ್ದಾರೆ ಎಂದು ಪ್ರಕರಣ ದಾಖಲಿಸಿ ಇಪ್ಪತೈದು ವರ್ಷ ಕೇಸ್ ನಡೆಸಿದರು.
2011ರ ಕೆಪಿಎಸ್‌ಸಿ ಪಾಸಾದ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಸಂದರ್ಭದಲ್ಲಿ ಆಗ ಅನ್ಯಾಯ ಆಗಿದೆ ಎಂದು ಹೇಳಿದ್ದ ಅಭ್ಯರ್ಥಿಯ ತಂದೆ ನನ್ನ ವಿರುದ್ಧ ಅನಗತ್ಯ ದಾಖಲೆ ಸೃಷ್ಟಿಸಿ ಪ್ರಕರಣ ದಾಖಲಿಸಿದರು. ಅದನ್ನು ಎದುರಿಸಿ, ಈಗ ಅಲ್ಲಿಯೇ ವಾಸವಾಗಿದ್ದೇನೆ. ಕೃಷಿ ಮಾಡಿಕೊಂಡು ನಿಜವಾದ ಕೃಷಿ ಅನುಭವ ಪಡೆದುಕೊಂಡಿದ್ದೇನೆ ಎಂದರು.