Advertisement

ದೋಸ್ತಿಗಳ ಹಾದಿ ಬೀದಿ ಫೈಟ್

12:30 AM Jan 31, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಆಪರೇಷನ್‌ ಕಮಲ ಕಾರ್ಯಾಚರಣೆಗಿಂತ ದೋಸ್ತಿ ಪಕ್ಷಗಳ ನಡುವಿನ ಕುಸ್ತಿಯೇ ಹೆಚ್ಚು ಸದ್ದು ಮಾಡುತ್ತಿದ್ದು, ಕಾಂಗ್ರೆಸ್‌ ವರ್ತನೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

Advertisement

ಕಾಂಗ್ರೆಸ್‌ನ ಸಚಿವರು ಹಾಗೂ ಮಾಜಿ ಸಚಿವರು ಪದೇ ಪದೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳುತ್ತಿರುವುದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಅರ್ಥದ ಹೇಳಿಕೆ ಕೊಡುತ್ತಿರುವ ಬಗ್ಗೆ ಬೇಸರಗೊಂಡಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿ ಬುಧವಾರ ತಮ್ಮ ಆಕ್ರೋಶ ಹೊರ ಹಾಕಿ ಮಿತ್ರ ಪಕ್ಷಕ್ಕೆ ಎಚ್ಚರಿಕೆ ಸಹ ನೀಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಕಾಂಗ್ರೆಸ್‌ ನಾಯ ಕರು ಹಾದಿ ಬೀದಿಯಲ್ಲಿ ಮಾತನಾಡಿದರೆ ನಾನು ಸುಮ್ಮನಿರಲ್ಲ. ಸರ್ಕಾರ ಮುನ್ನಡೆಸಬೇಕಾ? ರಾಜೀನಾಮೆ ನೀಡಬೇಕಾ? ನಾನು ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗಾದರೂ ಹೋಗಿದ್ದೆನಾ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಶಾಸಕರು, ಸಚಿವರಿಗೆ ನನ್ನ ಬಗ್ಗೆ ಅಸಮಾಧಾನ ಇದ್ದರೆ ನೇರವಾಗಿ ಬಂದು ಮಾತನಾಡಲಿ. ಅದು ಬಿಟ್ಟು ಎಲ್ಲೆಂದರಲ್ಲಿ ಹೇಳಿಕೆ ಕೊಟ್ಟರೆ ಹೇಗೆ? ನಾನು ಎಷ್ಟು ದಿನ ಸುಮ್ಮನಿರಬೇಕು ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೌಡರ ಆಕ್ರೋಶ: ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಯವರಿಗೆ ಕೆಟ್ಟ ಹೆಸರು ತರುವ ಯತ್ನ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದಂತೆ ಮಾತ ನಾಡಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಜತೆಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, ನೀವು ಐದು ವರ್ಷ ನೀವು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದಿರಿ. ನಾನೇನಾದರೂ ಮಾತನಾಡಿದೆನಾ? ಇದೀಗ ಕುಮಾರಸ್ವಾಮಿಯವರಿಗೆ ಆಡಳಿತ ನಡೆಸಲು ಅವಕಾಶ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

Advertisement

ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿಯವರು ಸಿಗಲ್ಲವಂತೆ. ಹಾಗಂತ ನಿತ್ಯ ಹೇಳಿಕೆ ಕೊಡ್ತಾರೆ. ಒಂದು ನಿಗಮ ಬಿಟ್ಟರೆ ಉಳಿದೆಲ್ಲ ಸ್ಥಾನ ಕೊಟ್ಟಿದ್ದೇವೆ. ಇನ್ನೂ ಹೇಗೆ ಆಡಳಿತ ನಡೆಸಬೇಕು. ಎಷ್ಟು ದಿನ ಅಂತ ಹೀಗೆ ನಡೆದುಕೊಳ್ತೀರಿ. ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದೇವೆ. ಹೀಗೆ ಲಘುವಾಗಿ ಮಾತನಾಡುವುದು ನಿಲ್ಲಿಸದಿದ್ದರೆ ನಿಯಂತ್ರಣ ತಪ್ಪಿ ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೊಂದಲದ ಹೇಳಿಕೆ ಕೊಡಬೇಡಿ: ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಆಕ್ರೋಶದ ನುಡಿಗಳು ಹೊರಬೀಳುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೆಲವು ನಾಯಕರು ಅಭಿಮಾನದಿಂದ ನೀಡುವ ಹೇಳಿಕೆಗಳಿಂದ ಗೊಂದಲ ಸೃಷ್ಠಿಯಾಗುತ್ತದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಕೆಳ ಹಂತದ ನಾಯಕರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ಫೆ.6ಕ್ಕೆ ಜಂಟಿ ಶಾಸಕಾಂಗ ಸಭೆ: ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಜೆಡಿಎಸ್‌ ಸಮಾವೇಶದಲ್ಲಿ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ, ನಾನು ಸಂಪುಟ ಸಭೆಯಲ್ಲಿದ್ದೆ. ನಾವು ಮುಖ್ಯಮಂತ್ರಿಯವರ ಮೇಲೆ ಯಾವ ಒತ್ತಡವನ್ನೂ ಹಾಕಿಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್‌ ಹೇಳಿದ್ದಾರೆ. ಫೆ.6 ಅಥವಾ 7 ರಂದು ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆಯುತ್ತೇವೆ. ಅಲ್ಲಿ ಎರಡೂ ಪಕ್ಷಗಳ ಶಾಸಕರು ಇರಲಿದ್ದು ಸಮಸ್ಯೆ ಹೇಳಿಕೊಳ್ಳಬಹುದು. ಸಿಎಂ ಪದೇ ಪದೇ ರಾಜೀನಾಮೆ ನೀಡುವ ಹೇಳಿಕೆ ನೀಡಬಾರದು ಎಂದಿದ್ದಾರೆ.

ನೀವು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದಿರಿ. ನಾನೇನಾದರೂ ಮಾತನಾಡಿದೆನಾ? ಇದೀಗ ಕುಮಾರ ಸ್ವಾಮಿಯವರಿಗೆ ಆಡಳಿತ ನಡೆಸಲು ಅವಕಾಶ ಕೊಡದಿದ್ದರೆ ಹೇಗೆ ?
– ದೇವೇಗೌಡ, ಮಾಜಿ ಪಿಎಂ

ನನ್ನ ತಂದೆ ಅನಿರೀಕ್ಷಿತವಾಗಿ ಪ್ರಧಾನಿ ಆದರು. ಪ್ರಧಾನಿ ಹುದ್ದೆಯನ್ನೇ ಲೆಕ್ಕಿಸದೆ ರಾಜೀನಾಮೆ ಕೊಟ್ಟ ಕುಟುಂಬ ನಮ್ಮದು.
ಹೀಗಾಗಿಯೇ ನಾನೂ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದೆ.
– ಕುಮಾರಸ್ವಾಮಿ, ಸಿಎಂ

ನಮ್ಮ ನಡುವೆ ಕೆಮಿಸ್ಟ್ರಿ ಸರಿ ಇದೆ, ಮ್ಯಾಥ್‌ ಮ್ಯಾಟಿಕ್ಸ್‌ ಸರಿ ಇಲ್ಲ. ಮ್ಯಾಥ್‌ ಮ್ಯಾಟಿಕ್ಸ್‌ನಲ್ಲಿ ನಮ್ಮದೇ ಮೇಲು. ನಾನು ಏನಾದರೂ ಹೇಳುವುದಿದ್ದರೆ ಸಮ ನ್ವಯ ಸಮಿತಿಯಲ್ಲಿ ಮಾತ್ರ ಮಾತನಾಡುತ್ತೇನೆ.
– ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next