ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ಆರಂಭ. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಸುದೀರ್ಘವಾಗಿ ಭಾಷಣ ಮಾಡಿದ ನಂತರ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.
ನೂತನ ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಅನುಮತಿ ನೀಡಿದರು. ಬಳಿಕ ಸಿಎಂ ಕುಮಾರಸ್ವಾಮಿ ವಿಶ್ವಾಸಮತದ ಪ್ರಸ್ತಾವನೆ ಮಂಡಿಸಿ, ಭಾಷಣ ಮಾಡಿದರು.
ಕುಮಾರಸ್ವಾಮಿ ಭಾಷಣ:
ಕರ್ನಾಟಕ ವಿಧಾನಸಭಾ ಫಲಿತಾಂಶ ಪ್ರಕಟವಾದಾಗ ಯಾವುದೇ ಕಾರಣಕ್ಕೂ ಜೆಡಿಎಸ್, ಕಾಂಗ್ರೆಸ್ ಅಧಿಕಾರಕ್ಕೆ ಏರಲು ಬಿಡೋದಿಲ್ಲ ಎಂಬ ಹೇಳಿಕೆಯನ್ನು ಪ್ರಧಾನಿ ಮೋದಿ ಕೊಟ್ಟಿದ್ದರು. ಈ ಮಾತನ್ನು ಅವರು ಹೇಳಿದ್ದು ಎಷ್ಟು ಸೂಕ್ತ ಎಂಬುದು ಪ್ರಶ್ನೆ. ಇದು ಎಲ್ಲೋ ಒಂದು ಕಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮೇಲೆ ಮಾತನಾಡುತ್ತ ತಿಳಿಸಿದರು.
ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ 38, ಕಾಂಗ್ರೆಸ್ ನ 78 ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿ ಮನವಿ ಸಲ್ಲಿಸಿದ್ದಾಗ ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು.
ನಾನು ವಚನ ಭ್ರಷ್ಟನಲ್ಲ:
ಅಂದು ನನ್ನ ಮತ್ತು ಯಡಿಯೂರಪ್ಪನವರ ನಡುವೆ ಮಾತ್ರ ಒಪ್ಪಂದವಾಗಿತ್ತು. ಆ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪನವರೂ ಕೂಡಾ ಜತೆಗಿದ್ದರು. ವಚನ ಭ್ರಷ್ಟ ಅನ್ನೋದು ನನ್ನಿಂದ ಆದದ್ದಲ್ಲ. ವಿನಾಕಾರಣ ನನ್ನ ಮೇಲೆ ವಚನಭ್ರಷ್ಟ ಎಂದು ಹಣೆಪಟ್ಟಿ ಕೊಟ್ಟರು. ನಾನು ಬಿಜೆಪಿ ವರಿಷ್ಠರ ಜತೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕುಮಾರಸ್ವಾಮಿ ಹಳೆಯ ಘಟನೆಗಳ ಮೆಲುಕು ಹಾಕಿದರು.