Advertisement

ಪಕ್ಷ ಅಧಿಕಾರಕ್ಕೆ ತಂದರೆ ರೈತರ ಸಮಸ್ಯೆ ಬಗೆಹರಿಸುವೆ, ಇಲ್ಲವೆ ಪಕ್ಷ ತ್ಯಜಿಸುವೆ : HDK

06:49 PM Apr 20, 2022 | Team Udayavani |

ಹನೂರು : ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಪೂರ್ಣ ಪ್ರಮಾಣದೊಂದಿಗೆ ಬಹುಮತ ನೀಡಿ, ಈ ರಾಜ್ಯದ ರೈತರಿಗೆ ಅವಶ್ಯಕವಾದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಇಲ್ಲದಿದ್ದಲ್ಲಿ ಜೆಡಿಎಸ್ ಪಕ್ಷವನ್ನು ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಹನೂರು ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದವತಿಯಿಂದ ಆಯೋಜಿಸಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಈ ರಾಜ್ಯದಲ್ಲಿ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ 4ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ಅನುದಾನದ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಸರ್ಕಾರಗಳು 8ಸಾವಿರ ಕೋಟಿ ಅನುದಾನವನ್ನಷ್ಟೇ ಖರ್ಚು ಮಾಡುತ್ತಿವೆ.ಇದೇ ರೀತಿಯಾದರೆ ಯೋಜನೆಗಳು ಪೂರ್ಣಗೊಳ್ಳಲು ಕನಿಷ್ಠ 100 ವರ್ಷಗಳಾದರು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣಬಹುಮತದ ಅಧಿಕಾರ ನೀಡಿದಲ್ಲಿ 5 ವರ್ಷಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ ಸಮಸ್ಯೆ ಬಗೆಹರಿಸಬೇಕಾದ ಕಾಂಗ್ರೆಸ್‍ನವರು ಈಶ್ವರಪ್ಪನವರ ಬಂಧನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ಶ್ವರಪ್ಪನವರ ಬಂಧನವಾದರೆ ರಾಜ್ಯದ ರೈತರ ಸಮಸ್ಯೆ ಬಗೆಹರಿಯುತ್ತದೆಯೇ ಎಂದು ಸಭೆಯಲ್ಲಿ ಆಸೀನರಾಗಿದ್ದ ಕಾಯಕರ್ತರನ್ನು ಪ್ರಶ್ನಿಸಿದರು. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಅಧಿಕಾರದಲ್ಲಿದೆ ಕಿತ್ತೊಗೆಯಬೇಕು ಎನ್ನುತ್ತಿದ್ದಾರೆ, ಅಂಹ 40% ಸರ್ಕಾರವನ್ನು ಅಧಿಕಾರಕ್ಕೆ ತಂದವರು ಯಾರು? ಇಂತಹ ಕೆಟ್ಟ ಸರ್ಕಾರವನ್ನು ಅಧಿಕಾರಕ್ಕೆ ತಂದ ಕೀರ್ಇ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.

ಇದನ್ನೂ ಓದಿ : ಗುಡಿಸಲಿಗೆ ಬೆಂಕಿ ಬಿದ್ದು ಒಂದೇ ಕುಟುಂಬದ ಏಳು ಮಂದಿ ಜೀವಂತ ದಹನ

ಮಂಜುನಾಥ್‍ರನ್ನು ಗೆಲ್ಲಿಸಿ : ಹನೂರು ಕ್ಷೇತ್ರದ 2018ರ ಚುನಾವಣೆಯಲ್ಲಿ ನಮ್ಮಿಂದ ಕೆಲವು ತಪ್ಪುಗಳಾಗಿವೆ. ಆದುದರಿಂದ ನಮ್ಮ ಅಭ್ಯರ್ಥಿ ಸೋಲುವಂತಾಯಿತು. ಆದರೆ ಮಂಜುನಾಥ್ ಚುನಾವಣೆಯಲ್ಲಿ ಸೋತ ನಂತರವೂ ಹಳ್ಳಿಹಳ್ಳಿಗೂ ಭೇಟಿ ನೀಡಿ ವಿಶ್ವಾಸ ಮೂಢಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು ಇವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 2023ರ ಚುನಾವಣೆಯಲ್ಲಿ ನಿಮ್ಮ ಮನೆಯ ಮಗನಾಗಿರುವ ಮಂಜುನಾಥ್ ಅವರನ್ನು ಆಶೀರ್ವದಿಸಿ ಆಯ್ಕೆ ಮಾಡಿಕೊಡಬೇಕು. ಅವರನ್ನು ಗೆಲ್ಲಿಸಿ ಕಳುಹಿಸಿಕೊಟ್ಟಲ್ಲಿ ಕ್ಷೇತ್ರದ ಅರಣ್ಯ ಕಾಯ್ದೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಘೋಷಿಸಿದರು.

Advertisement

2 ಬಾರಿಯೂ ಅಲ್ಪಾವಧಿ ಸರ್ಕಾರ : ಈ ರಾಜ್ಯದಲ್ಲಿ ನಾಣು 2 ಬಾರಿ ಸರ್ಕಾರ ರಚನೆ ಮಾಡಿದ್ದು ಒಮ್ಮೆ ಬಿಜೆಪಿ ಜೊತೆ ಮತ್ತೊಮ್ಮೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆವು. ಆದರೆ ಈ 2 ಸರ್ಕಾರಗಳೂ ಅಲ್ಪಾಯುಷಿ ಸರ್ಕಾರಗಳಾಗಿದ್ದು ನನ್ನ ಮನಸ್ಸಿನಲ್ಲಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರ ನೀಡಿದಲ್ಲಿ 6 ಸಾವಿರ ಗ್ರಾ.ಪಂ ಕೇಂದ್ರ ಸ್ಥಾನಗಳಲ್ಲಿಯೂ 30 ಬೆಟ್ ವ್ಯವಸ್ಥೆಯೊಂದಿಗೆ ಅಗತ್ಯ ಆರೋಗ್ಯ ಸೇವೆ, ಉಚಿತ ಶಿಕ್ಷಣಕ್ಕಾಗಿ ಎಲ್.ಕೆ.ಜಿ ಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತ ಇಂಗ್ಲೀಷ್ ಮಾಧ್ಯಮಗಳಲ್ಲಿ ಶಿಕ್ಷಣ ನೀಡುವ ಶಾಲೆ ತೆರೆಯುವ ಯೋಜನೆ, ಪ್ರತಿ ಕುಟುಂಬಕ್ಕೂ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಡುವುದು, ರೈತರಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ ನೀಡುವ ಯೋಜನೆ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಜಾರಿಗಳಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಟಿ.ನರಸೀಪುರ ಶಾಸಕ ಅಶ್ವಿನ್‍ಕುಮಾರ್, ವಿ.ಪ.ಸದಸ್ಯ ಮಂಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಶ್ರೀನಿವಾಸ್, ನರಸಿಂಹ, ಮುಳ್ಳೂರು ಶಿವಮಲ್ಲು, ಸಯ್ಯದ್ ಅಕ್ರಂ, ಜಸೀಂ, ಮಹೇಶ್‍ಗೌಡ, ಉಷಾ, ಶಾಗ್ಯ ಬಾಬು, ರವೀಂದ್ರ ಇನ್ನಿತರ ಮುಖಂಡರು ಹಾಜರಿದ್ದರು.

ಬಂಡಾಯದ ಬಿಸಿ: ಜೆಡಿಎಸ್ ಪಕ್ಷದಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಂಗನಲ್ಲೂರು ಶಿವಪ್ರಕಾಶ್‍ಬಾಬು, ಅವರ ಪುತ್ರ ಸತ್ತೇಗಾಲ ಜಿ.ಪಂ ಟಿಕೆಟ್ ಆಕಾಂಕ್ಷಿ ಚನ್ನೇಶ್‍ಗೌಡ, ಹನೂರು ಪ.ಪಂ ಸದಸ್ಯ ಮಹೇಶ್, ಪವಿತ್ರಾ ಪ್ರಸನ್ನ ಕುಮಾರ್, ನಾಗೇಂದ್ರ, ಸ್ವಾಮಿಗೌಡ, ಪಾಳ್ಯ ಸಿದ್ದಪ್ಪಾಜಿ ಹಾಗೂ ಇನ್ನಿತರ ಮುಖಂಡರು ಗೈರು ಹಾಜರಾಗಿದ್ದರು. ಈ ಮೂಲಕ ಕೆಲವರು ಮಂಜುನಾಥ್ ಅವರ ಕಾರ್ಯವೈಖರಿ ಬಗ್ಗೆ ಗೈರುಹಾಜರಾಗುವ ಮುಖೇನ ಅಸಮಾಧಾನ ವ್ಯಕ್ತಪಡಿಸಿದರು. ಈ ಮೂಲಕ ಜೆಡಿಎಸ್ ಪಕ್ಷದಲ್ಲಿಯೂ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ರವಾನೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next