Advertisement

HD Kumaraswamy ನಿಮ್ಮ ಪುತ್ರನನ್ನು ವಿದೇಶಕ್ಕೆ ಮೋಜು ಮಾಡಲು ಕಳುಹಿಸಿದ್ದು ನೀವೇನಾ?

10:00 PM May 24, 2024 | Team Udayavani |

ಬೆಂಗಳೂರು: ನಿಮ್ಮ ಪುತ್ರ ದಿವಂಗತ ರಾಕೇಶ್‌ನನ್ನು ಟುಮಾರೋ ಲ್ಯಾಂಡ್‌ ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅಲ್ಲಿ ಅವರ ಸಾವಿಗೆ ನೀವೇ ಕಾರಣರಾದಿರಿ ಎಂದರೆ ನಿಮಗೆ ಹೇಗಾಗಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್‌.ಡಿ.ಕುಮಾರಸ್ವಾಮಿ ಅವರು ರಾಕೇಶ್‌ ಸಾವಿನ ವಿಷಯ ಕೆದಕಿ ತಿರುಗೇಟು ನೀಡಿದ್ದಾರೆ.

Advertisement

ನನ್ನ ಮಾತಿಗೆ ಗೌರವ ಕೊಟ್ಟು ಪ್ರಜ್ವಲ್‌ ವಾಪಸ್‌ ಬಂದು ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಕುಟುಂಬದಿಂದ ಹೊರ ಹಾಕುತ್ತೇನೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಅವರ ಮಾತೇ ನಮ್ಮ ಕುಟುಂಬದ ಮಾತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್‌ ನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ. ವಿದೇಶಕ್ಕೆ ಕಳಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದು ಕೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಎನ್ನುವುದು ಅಸ್ತಿತ್ವದಲ್ಲಿ ಇದೆಯಾ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ ಅವರು, ದೇವೇಗೌಡರಿಗೆ ಹೇಳಿಯೇ ವಿದೇಶಕ್ಕೆ ಹೋಗಿದ್ದಾನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪ್ರಜ್ವಲ್‌ ರೇವಣ್ಣ ನಮ್ಮ ಕುಟುಂಬದ ಸಂಪರ್ಕದಲ್ಲಿ ಇಲ್ಲ. ಹಿಂದೆಯೂ ಹೇಳಿದ್ದೆ , ಈಗಲೂ ಹೇಳುತ್ತಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ.

ಸಿಎಂ ಪುತ್ರನ ಪ್ರಕರಣ
ದೇವೇಗೌಡರ ಬಗ್ಗೆ ನೀವು ಮಾಡಿದ ಆರೋಪ ಇದೇ ಧಾಟಿಯಲ್ಲಿದೆ. ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಕಟುವಾಗಿ ಹೇಳಿದ್ದಾರೆ.
ಎಸ್‌ಐಟಿ ಹೆಸರಿನಲ್ಲಿ ಎಷ್ಟು ಸ್ಲಿಪರ್‌ ಸೆಲ್‌ ಗಳು ತನಿಖೆ ಮಾಡುತ್ತಿವೆ ಎಂದು ಬಿಚ್ಚಿಟ್ಟರೆ ನಿಮ್ಮ ಸರ್ಕಾರದ ಕಥೆ ಮುಗಿದೇ ಹೋಗುತ್ತದೆ. ಡಿ. ಕೆ. ಶಿವು ಆದೇಶದ ಮೇರೆಗೆ ಪೆನ್‌ ಡ್ರೈವ್‌ ಗಳನ್ನು ಹಂಚಿದ ಕಿರಾತಕರೆಲ್ಲ ದಿನ ಬೆಳಗಾದರೆ ಯಾರ ಮನೆಯಲ್ಲಿ ಪ್ರತ್ಯಕ್ಷರಾಗುತ್ತಾರೆ? ವಿಧಾನಸೌಧದಲ್ಲಿ ಯಾರ ಕಚೇರಿಯೊಳಕ್ಕೆ ನುಸುಳುತ್ತಾರೆ ಎನ್ನುವುದು ಇಂಟೆಲಿಜೆನ್ಸ್‌ ಇಟ್ಟುಕೊಂಡಿರುವ ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ? ಎಂದು ಮುಖ್ಯಮಂತ್ರಿಗಳನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಸಿದ್ದರಾಮಯ್ಯ ಅವರು ನಾನು ವಕೀಲನಾಗಿದ್ದೆ, ಹಿಂದೆ ನಾನೂ ವಕೀಲಿಕೆ ಮಾಡುತ್ತಿದ್ದೆ ಎಂದು ಪದೇಪದೆ ಹೇಳಬಾರದು. ನಿಮ್ಮ ವಕೀಲಿ ಜ್ಞಾನದ ಮೇಲೆ ಅಗೌರವ ಬರುವಂತೆ ಮಾತನಾಡಬೇಡಿ. ಎಷ್ಟೋ ಮಹಾನುಭಾವರು ಈ ವೃತ್ತಿಗೆ ಕಳಸಪ್ರಾಯರಾಗಿದ್ದಾರೆ. ದಯಮಾಡಿ ಅವರೆಲ್ಲರನ್ನು ಅಪಮಾನಿಸಬೇಡಿ.
ಅತ್ಯಾಚಾರದ ವಿಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ ಎನ್ನುವ ಸಿದ್ದರಾಮಯ್ಯ ಅವರ ಮಾತು ಅವರ ವಕೀಲಿಕೆಯ ಪಾಂಡಿತ್ಯದ ಬಗ್ಗೆ ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮನುಷ್ಯತ್ವವೇ? ದಯಮಾಡಿ ನೀವು ಇನ್ನೆಂದೂ ನಾನು ವಕೀಲಿಕೆ ಮಾಡುತ್ತಿದ್ದೆ ಎನ್ನಬೇಡಿ. ನಿಮ್ಮ ಪಕ್ಕದಲ್ಲಿ ಪೆನ್‌ ಡ್ರೈವ್‌ ಹಂಚಿಕೆದಾರ ಕೂತಿದ್ದಾರೆ. ಆ ಡಿ. ಕೆ. ಶಿವು ಚುನಾವಣಾ ಸ್ವಾರ್ಥಕ್ಕಾಗಿ ಹೆಣ್ಮಕ್ಕಳ ಮಾನವನ್ನು ಪೆನ್‌ ಡ್ರೈವುಗಳಿಗೆ ತುಂಬಿಸಿ ಹಾದಿಬೀದಿಯಲ್ಲಿ ಮಾರಿಕೊಂಡಿದ್ದು ನಿಮಗೆ ಗೊತ್ತಿಲ್ಲವೇ? ಇಂಥ ಮಾನದ್ರೋಹಿಯನ್ನು ಪಕ್ಕದಲ್ಲೇ ಕೂರಿಸಿಕೊಳ್ಳಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ? ಪ್ರಶ್ನೆ ಮಾಡಿಕೊಳ್ಳಿ. ನಿಮ್ಮ ಉಪ ಮುಖ್ಯಮಂತ್ರಿ ಪೆನ್‌ ಡ್ರೈವ್‌ ಹಂಚಿಕೆಯಲ್ಲಿ ಶಾಮೀಲಾಗಿಲ್ಲವೇ? ಎಂದು ಅವರನ್ನು ಒಮ್ಮೆಯಾದರೂ ಕೇಳಿಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next