Advertisement

ಅರ್ಕಾವತಿ ಪ್ರಕರಣ ಎಚ್‌ಡಿಕೆಗೆ ರಿಲೀಫ್

06:00 AM Aug 28, 2018 | Team Udayavani |

ಬೆಂಗಳೂರು: ಅರ್ಕಾವತಿ ಬಡಾವಣೆಯ ಥಣಿಸಂದ್ರದ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ರಿಲೀಫ್ ಸಿಕ್ಕಿದೆ. ಪ್ರಕರ‌ಣದಿಂದ ಸಿಎಂ ಕುಮಾರಸ್ವಾಮಿ ಸೇರಿ ಮೂವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೈ ಬಿಟ್ಟಿದೆ.

Advertisement

ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಹಾಗೂ ಇತರೆ ಮೂವರು ಆರೋಪಿಗಳು ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾ. ವಿ.ವಿ.ಪಾಟೀಲ್‌ ಅವರು, ಸಿಎಂ ಕುಮಾರಸ್ವಾಮಿ ಹಾಗೂ ಇತರೆ ಆರೋಪಿಗಳಾದ ಶ್ರೀರಾಮ್‌ ಮತ್ತು ಜ್ಯೋತಿರಾಮಲಿಂಗಂ ಹೆಸರನ್ನು ಪ್ರಕರಣದಿಂದ ಕೈ ಬಿಡುವಂತೆ ಆದೇಶಿಸಿದ್ದಾರೆ.

ಡಿನೋಟಿಫಿಕೇಷನ್‌ ಮಾಡಿದ ನಾಲ್ಕು ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಅಲ್ಲದೆ, ದೂರುದಾರರು ದೂರು ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ. ಜತೆಗೆ ಲಾಭ ಹಾಗೂ ಉದ್ದೇಶಪೂರ್ವಕವಾಗಿ ಡಿನೋಟಿಫೈ ಮಾಡಿಲ್ಲ. ಈ ಅಕ್ರಮಕ್ಕೆ ಸೂಕ್ತ ಸಾûಾ$Âಧಾರಗಳು ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರು ಮೂವರನ್ನು ಆರೋಪದಿಂದ ಮುಕ್ತಗೊಳಿಸಿ ಈ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?: ಎಚ್‌.ಡಿ. ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ ಮಾಡಲಾಗಿತ್ತು. ಬೆಂಗಳೂರು ಉತ್ತರ ತಾಲ್ಲೂಕಿನ ಥಣಿಸಂದ್ರ ಗ್ರಾಮದ ಸರ್ವೆ ನಂಬರ್‌ 87/4 (ಬಿ)ನಲ್ಲಿನ 3 ಎಕರೆ 8 ಗುಂಟೆ ಜಮೀನು ಡಿನೋಟಿಫಿಕೇಷನ್‌ ಮಾಡಿದ್ದರು. ಇದನ್ನು ಆಕ್ಷೇಪಿಸಿ ಚಾಮರಾಜನಗರದ ಮಹಾದೇವಸ್ವಾಮಿ ಎಂಬುವರು 2012ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚೆನ್ನಿಗಪ್ಪ, ಜಮೀನಿನ ಮಾಲೀಕರಾದ ಎ.ವಿ. ರವಿಪ್ರಕಾಶ್‌, ಎ.ವಿ ಶ್ರೀರಾಮ್‌ ಹಾಗೂ ಖರೀದಿದಾರ ಜ್ಯೋತಿ ರಾಮಲಿಂಗಂ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next