ರಾಮನಗರ: ಸಚಿವ ಈಶ್ವರಪ್ಪ ಅವರಂತೆ ಬಾಯಿ ಚಪಲಕ್ಕೆ ಮಾತನಾಡುವ ವ್ಯಕ್ತಿ ನಾನಲ್ಲ. ವಾಸ್ತವಾಂಶಗಳನ್ನು ಇಟ್ಟುಕೊಂಡೆ ಮಾತನಾಡುತ್ತೇನೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ತಾಲೂಕಿನ ಬಿಡದಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಶ್ವರಪ್ಪನವರು ತಮ್ಮ ನಾಲಿಗೆಗೆ ಕಡಿವಾಣ ಹಾಕಿಕೊಳ್ಳುವುದನ್ನು ಕಲಿಯಲಿ. ನಿನ್ನೆ ನನ್ನ ಟ್ವೀಟ್‌ಗಳಲ್ಲಿ ಈಶ್ವರಪ್ಪ ಅವರು ಈ ಹಿಂದೆ ಮಾತನಾಡಿರುವುದನ್ನು ನೆನಪಿಸಿದ್ದೇನೆ ಎಂದರು.
“ಸೈನಿಕ ವೃತ್ತಿಗೆ ಸೇರುವವರು ಬಡವರು’ ಎಂಬ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು. ಶ್ರೀಮಂತರು ಯಾರೂ ತಮ್ಮ ಮಕ್ಕಳನ್ನು ಸೈನಿಕ ವೃತ್ತಿಗೆ ಕಳುಹಿಸೋಲ್ಲ. ಯಡಿಯೂರಪ್ಪ, ಈಶ್ವರಪ್ಪ ಅವರು ತಮ್ಮ ಮಕ್ಕಳನ್ನು ಸೈನಿಕ ವೃತ್ತಿಗೆ ಕಳುಹಿಸಿದ್ದಾರೆಯೇ?. ಕುಟುಂಬ ನಿರ್ವಹಣೆಗೆ ಸೈನಿಕ ವೃತ್ತಿ ಸೇರುತ್ತಾರೆಂಬ ತಮ್ಮ ಹೇಳಿಕೆ ಅವಮಾನದ ಮಾತಲ್ಲ. ಅದರಲ್ಲಿ ಮಹಾ ಅಪರಾಧ ಏನಿದೆ ಎಂದು ಪ್ರಶ್ನಿಸಿದರು. ಅನೇಕ ಸೈನಿಕ ಕುಟುಂಬಗಳು ತಮ್ಮ ಬಳಿ ಮಾತನಾಡಿ ತಮ್ಮ ಅನಿಸಿಕೆ ಸರಿ ಎಂದು ತಿಳಿಸಿದ್ದಾರೆ ಎಂದರು.
ತಪ್ಪು ನೀತಿಗಳಿಂದ ನಿರುದ್ಯೋಗ ಸಮಸ್ಯೆ:
ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದಲ್ಲಿಂದು ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತ ಹೆಚ್ಚು ಕಾಡುತ್ತಿದೆ. ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ.
ಆಟೋಮೊಬೈಲ್, ಸಿದ್ಧ ಉಡುಪು ಕಾರ್ಖಾನೆಗಳು ಸೇರಿ ಅನೇಕ ಕೈಗಾರಿಕೆಗಳು ಇಂದು ಮುಚ್ಚುವ ಹಂತಕ್ಕೆ ಬಂದಿವೆ. ಈ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರ ನೌಕರಿಗೆ ಕುತ್ತು ಬಂದಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಮರೆಮಾಚುವ ಸಲುವಾಗಿ ಪ್ರಧಾನಿ ಮೋದಿಯವರು ಪೌರತ್ವ ತಿದ್ದುಪಡಿ ಮುಂತಾದ ಕಾಯ್ದೆಗಳನ್ನು ಜಾರಿ ಮಾಡುತ್ತಿದ್ದಾರೆ. ಆ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ರೈತರ ಸಾಲ ಮನ್ನಾದಿಂದ ರಾಜ್ಯದ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎನ್ನುವುದು ಸುಳ್ಳು ಆರೋಪ. 14 ತಿಂಗಳಲ್ಲಿ ವಿವಿಧ ಮೂಲಗಳಿಂದ 25 ಸಾವಿರ ಕೋಟಿ ರೂ. ಸಂಗ್ರಹಿಸಲಾಗಿತ್ತು. ಇಲ್ಲಿಯವರೆಗೆ 18 ಸಾವಿರ ಕೋಟಿ ರೂ. ಸಾಲ ಮನ್ನಾ ಆಗಿದೆ. ಆದರೆ, ತಮ್ಮ ಆಡಳಿತಾವಧಿಯಲ್ಲಿ ಮಂಜೂರಾಗಿದ್ದ ಆನೇಕ ಕಾರ್ಯಕ್ರಮಗಳಿಗೆ ಹಾಲಿ ಸರ್ಕಾರ ತಡೆಯೊಡ್ಡಿದೆ ಎಂದರು.